ಉಡುಪಿ: ಮುಂಗಾರು ಮುಕ್ತಾಯವಾಗುತ್ತಿದ್ದಂತೆ ಮೀನುಗಾರಿಕೆ ಚುಟುವಟಿಕೆ ಆರಂಭಿಸಲು ಉಡುಪಿಯ ಮಲ್ಪೆ ಬಂದರಿನಲ್ಲಿ ಈಗಿನಿಂದಲೇ ಮೀನುಗಾರರು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಳೆಗಾಲವಾದ್ದರಿಂದ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗಿತ್ತು. ಈ ಗಡುವು ಮುಗಿಯುತ್ತಿದ್ದು ಆಗಸ್ಟ್ 1ರಿಂದ 10 ತಿಂಗಳು ಕಾಲ ಮೀನುಗಾರಿಕೆ ನಡೆಯಲಿದೆ.
ಈ ಬಗ್ಗೆ ಕಾರ್ಮಿಕ ಒಕ್ಕೂಟದ ಕಾರ್ಯದರ್ಶಿ ಶಿವಾನಂದ ಕುಂದಾರ್ ಪ್ರತಿಕ್ರಿಯಿಸಿ, "ಸುಮಾರು 15,000 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. 2,000ಕ್ಕೂ ಹೆಚ್ಚು ದೋಣಿಗಳು ಮೀನುಗಾರಿಕಾ ಚಟುವಟಿಕೆ ನಡೆಸುತ್ತವೆ. 2,000 ಬೋಟ್‌ಗಳಲ್ಲಿ ಸ್ಪೀಡ್ ಬೋಟ್‌ಗಳು, ಡೀಪ್ ಸೀ ಬೋಟ್‌ಗಳು, 370 ಮೀನುಗಾರಿಕಾ ದೋಣಿಗಳು, ಸಣ್ಣ ದೋಣಿಗಳು ಮತ್ತು ಟ್ರಾಲರ್‌ಗಳು ಸೇರಿವೆ. ದೊಡ್ಡ ಬೋಟ್ಗಳಿಗೆ ಬೋಟ್‌ಗೆ 30 ಜನ, ಸ್ಪೀಡ್ ಬೋಟ್‌ಗೆ 12 ಜನ, 370 ಮೀನುಗಾರಿಕೆ ದೋಣಿಗೆ 6 ಜನ ಹಾಗು ಸಣ್ಣ ದೋಣಿಗಳಿಗೆ 5 ರಿಂದ 6ಜನರ ಅಗತ್ಯವಿರುತ್ತದೆ. ಆಳ ಸಮುದ್ರ ಮೀನುಗಾರಿಕೆ ನಿಷೇಧದಿಂದಾಗಿ ಸದ್ಯ ದೋಣಿಗಳು ಮತ್ತು ಮೀನುಗಳ ಬಲೆಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಇಡೀ ಕುಟುಂಬದವರು ಸೇರಿ ಎರಡು ತಿಂಗಳ ಕಾಲ ಬಲೆಗಳನ್ನು ಸರಿಪಡಿಸುವುದು ಮತ್ತು ದೋಣಿಗಳ ರಿಪೇರಿ ಕೆಲಸ ಮಾಡುತ್ತೇವೆ" ಎಂದರು.
ಮೀನುಗಾರ ಜಗನ್ನಾಥ ಕರ್ಕರೆ ಎಂಬವರು ಮಾತನಾಡಿ, "ಮೀನುಗಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ತೀರ ಕಡಿಮೆ. ಇದರಿಂದ ಮೀನುಗಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಮೀನುಗಾರಿಕೆಯ ವೇಳೆ ಸಾವನ್ನಪ್ಪಿದ್ದರೆ ಸರ್ಕಾರ ಕೇವಲ 1 ಲಕ್ಷ ಅಥವಾ 2 ಲಕ್ಷ ರೂಪಾಯಿ ಮಾತ್ರ ನೀಡುತ್ತದೆ" ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತೊಬ್ಬ ಮೀನುಗಾರರು ಮಾತನಾಡಿ, "ಸರ್ಕಾರವು ನಮಗೆ ಯಾವುದೇ ಸಹಾಯಧನ ನೀಡುವುದಿಲ್ಲ. ನಾವು 1 ಕೋಟಿಯಿಂದ 1.3 ಕೋಟಿ ರೂ.ಗಳ ಬೋಟ್ ತಯಾರಿಸುತ್ತೇವೆ. ಸಾಲಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹೋದರೆ ನಮ್ಮ ದೋಣಿಯನ್ನು ಒತ್ತೆ ಇಡಬೇಕಾಗುತ್ತದೆ. ನಷ್ಟ ಸಂಭವಿಸಿದರೆ ಬ್ಯಾಂಕ್ ನವರು ಹಡಗುಗಳನ್ನು ಜಪ್ತಿ ಮಾಡುತ್ತಾರೆ. ಇದೀಗ ಮುಂಗಾರು ಮುಕ್ತಾಯದ ಹಂತ ತಲುಪಿದ್ದು, ಕೆಲಸ ಪ್ರಾರಂಭಿಸಲು ಮೀನುಗಾರ ಸಮುದಾಯ ಕಾತರದಿಂದ ಕಾಯುತ್ತಿದೆ" ಎಂದು ಮೀನುಗಾರರ ಬವಣೆ ವಿವರಿಸಿದರು.
ಕಳೆದ ತಿಂಗಳು ಜೂನ್ 1ರಿಂದ ಜುಲೈ 31ರ ವರೆಗೆ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಈ ಅವಧಿಯಲ್ಲಿ ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗುವುದರಿಂದ ಮೀನುಗಳ ಮೊಟ್ಟೆಗಳು ಮತ್ತು ಮರಿಗಳು ನಾಶವಾಗಬಾರದು ಎಂಬ ಕಾರಣಕ್ಕೆ 61 ದಿನಗಳ ಕಾಲ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ.
ಜೂನ್-ಜುಲೈ ಅವಧಿಯಲ್ಲಿ ವೇಗವಾಗಿ ಬೀಸುವ ಗಾಳಿಯಿಂದ ಸಮುದ್ರದಲೆಗಳ ರಭಸ ಹೆಚ್ಚು. ಇದರಿಂದ ಮೀನುಗಾರರಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಮೀನುಗಾರಿಕೆ ಇಲಾಖೆ ಆದೇಶ ಮಾಡಿತ್ತು.
ಇದನ್ನೂ ಓದಿ: ಮಂಗಳೂರು: ದೋಣಿ ಮಗುಚಿ ನದಿಯಲ್ಲಿ ಸಿಲುಕಿದ್ದ ಯುವಕನ ರಕ್ಷಣೆ - ವಿಡಿಯೋ