ಉಡುಪಿ: ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಗಳು ಸರಿಯಾದ ಮಾಹಿತಿ ನೀಡದಿದ್ದರೆ ಅಥವಾ ವಾಸ್ತವತೆ ಮುಚ್ಚಿಟ್ಟರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಉಡುಪಿ ಡಿ.ಸಿ. ಮತ್ತೊಮ್ಮೆ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಜಿಲ್ಲೆಯ ಜನತೆಗೆ ಮನವಿ ಮಾಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್ , ಪಾಸಿಟಿವ್ ಬಂದವರಿಗೆ ಕಂಟ್ರೋಲ್ ರೂಂನಿಂದ ಫೋನ್ ಮಾಡುತ್ತೇವೆ. ಆ ಸಂದರ್ಭದಲ್ಲಿ ಕೆಲವರು ಸರಿಯಾಗಿ ಸ್ಪಂದಿಸದಿರುವುದು ಕಂಡುಬಂದಿದೆ. ಮಾಹಿತಿ ನೀಡದೇ ಇರುವುದು ಅಥವಾ ಆರೋಗ್ಯ ಕಾರ್ಯಕರ್ತರ ಜೊತೆ ಉಡಾಫೆ ವರ್ತನೆ ತೋರುತ್ತಾರೆ. ಈ ರೀತಿ ಮಾಡಿದರೆ ಕಾಯಿಲೆ ನಿಯಂತ್ರಣ ಕಷ್ಟವಾಗುತ್ತದೆ. ಹಾಗಾಗಿ ಜಿಲ್ಲಾಡಳಿತದ ಜೊತೆ ಸೂಕ್ತ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಪಾಸಿಟಿವ್ ಬಂದ ಕೆಲವು ವ್ಯಕ್ತಿಗಳು ಪ್ರೈಮರಿ ಸಂಪರ್ಕದ ಬಗ್ಗೆ ಸರಿಯಾದ, ಖಚಿತ ಮಾಹಿತಿ ನೀಡುತ್ತಿಲ್ಲ. ನಿಮಗೆ ಗೊತ್ತಿರಲಿ, ಪ್ರೈಮರಿ ಕಾಂಟಾಕ್ಟ್ ಇರುವ ಶೇ.50 ಜನರಿಗೆ ಪಾಸಿಟಿವ್ ಬರುತ್ತದೆ. ಆದರೆ ಮಾಹಿತಿ ಮುಚ್ಚಿಟ್ಟರೆ ಅವರು ಇತರರಿಗೂ ಕಾಯಿಲೆ ಹರಡಿಸುತ್ತಾರೆ. ಹೀಗಾಗಿ ಮಾಹಿತಿ ನೀಡದವರ ಅಥವಾ ವಾಸ್ತವ ಅಂಶ ಮುಚ್ಚಿಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.