ಉಡುಪಿ: ಕೊರೊನಾದಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ದಾಖಲೆ ಇದ್ದರೆ ನೀಡಿ. ಅದು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಅನಾವಶ್ಯಕ ಆರೋಪ ಮಾಡಿದ್ರೆ ಸುಮ್ಮನಿರಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಗರಂ ಆಗಿದ್ದಾರೆ.
ಕಳೆದ ಆರು ದಿನಗಳಿಂದ ಕ್ವಾರಂಟೈನ್ನಲ್ಲಿರುವ ಜಿಲ್ಲಾಧಿಕಾರಿಯವರು ಈ ಬಗ್ಗೆ ಮಾತನಾಡಿ, 26 ವರ್ಷದ ಮಹಿಳೆ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ತನಿಖೆಗಾಗಿ ತಂಡ ರಚನೆ ಮಾಡಿದ್ದೇವೆ. ತಪ್ಪು ಕಂಡುಬಂದರೆ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಲಾಗುತ್ತೆ ಎಂದರು.
ಶವ ಅದಲು ಬದಲಾದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆಯಿಂದರಲು ಸೂಚಿಸಿದ್ದೇವೆ. ಜಿಲ್ಲೆಯಲ್ಲಿ ಕೊರೊನಾ ಟೆಸ್ಟ್ ಪ್ರಮಾಣವನ್ನು ಹೆಚ್ಚು ಮಾಡಿದ್ದೇವೆ. ರೋಗ ಹಬ್ಬದಿರಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ರೋಗ ಲಕ್ಷಣ ಇಲ್ಲದವರು ಮನೆಯಲ್ಲೇ ಕ್ವಾರಂಟೈನ್ ಆಗಿ. ಅದು ಬಿಟ್ಟು ಸುತ್ತಾಡಿದರೆ ರೋಗ ಹಬ್ಬುತ್ತದೆ ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಯವರು ಹಣದ ದಂಧೆ ಮಾಡ್ತಾರೆ ಎಂಬ ಆರೋಪ ಮಾಡ್ತಾರೆ. ದುರುದ್ದೇಶದಿಂದ ಆರೋಪ ಮಾಡದೆ, ದಾಖಲೆ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ. ಅದು ಬಿಟ್ಟು ಸುಮ್ಮನೆ ಆರೋಪ ಮಾಡಿದ್ರೆ ಸಹಿಸುವುದಿಲ್ಲ ಅಂತಾ ಜಿಲ್ಲಾಧಿಕಾರಿ ಜಿ. ಜಗದೀಶ್ ಖಡಕ್ ವಾರ್ನಿಂಗ್ ನೀಡಿದ್ದಾರೆ.