ಉಡುಪಿ: ಕೃಷಿ ಕುಟುಂಬದಲ್ಲಿ ಜನಿಸಿ ಯಶಸ್ವಿ ಉದ್ಯಮಿಯಾಗಿ ಖ್ಯಾತಿ ಗಳಿಸಿರುವ ಈ ವ್ಯಕ್ತಿ, ತವರೂರಿನ ಕೃಷಿ ಮೇಲಿನ ಪ್ರೀತಿಯ ಜೊತೆಗೆ ಹೈನುಗಾರಿಕೆ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಯ ಕಾಪು ತಾಲೂಕಿನ ಸುರೇಶ್ ಪಿ.ಶೆಟ್ಟಿ ಗುರ್ಮೆ ಉದ್ಯಮಿ, ಸಮಾಜಸೇವಕ, ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ಬಡವರಿಗೆ ನ್ಯಾಯ ದೊರಕಿಸಿಕೊಟ್ಟವರು. ಅದರಲ್ಲೂ ಮುಖ್ಯವಾಗಿ ಗೋ ಪ್ರೇಮಿಯಾಗಿದ್ದು, ಕಾಪು ತಾಲೂಕಿನ ಕಳತ್ತೂರು ಗುರ್ಮೆ ಮನೆಯಲ್ಲಿ ಭಾಗೀರಥಿ ಗೋ ಗ್ರಹವನ್ನು ನಿರ್ಮಾಣ ಮಾಡಿ 70ಕ್ಕೂ ಅಧಿಕ ಗೋವುಗಳನ್ನು ಆರೈಕೆ ಮಾಡುತ್ತಿದ್ದಾರೆ. ಇದರಲ್ಲಿ ವಿವಿಧ ಜಾತಿಯ ಗೋವುಗಳಿದ್ದು, ಹೈನುಗಾರಿಕೆ ಮಾಡುತ್ತಿದ್ದಾರೆ.
ಸುರೇಶ್ ಶೆಟ್ಟಿ ಅವರ ತಾಯಿ ಕೂಡ ಕೃಷಿಕರಾಗಿದ್ದು, ಗೋವುಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ತಾಯಿ ಸ್ವರ್ಗಸ್ಥರಾದ ನಂತರ ಈಗ ಕಳತ್ತೂರು ಗುರ್ಮೆ ಮನೆಯ ಸಮೀಪ ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಮತ್ತು ಸ್ಥಳೀಯವಾಗಿ ಖರೀದಿ ಮಾಡಿದ ಸುಮಾರು ಮೂರು ಎಕರೆ ಜಮೀನಿನಲ್ಲಿ ಗುರ್ಮೆ ಗೋ ವಿಹಾರ ಕೇಂದ್ರವನ್ನು ನಿರ್ಮಾಣ ಮಾಡಿದ್ದಾರೆ. ಗುರ್ಮೆ ಫೌಂಡೇಶನ್ ಸ್ಥಾಪಿಸಿ ಗೋವುಗಳ ರಕ್ಷಣೆ ಮಾಡಲಾಗುತ್ತದೆ.
ತಾಯಿ ದಿವಂಗತ ಪದ್ಮಾವತಿ .ಪಿ ಶೆಟ್ಟಿ ಗುರ್ಮೆಯವರ ನಾಲ್ಕನೇ ಪುಣ್ಯತಿಥಿಯ ಪ್ರಯುಕ್ತ ಫೆಬ್ರವರಿ. 20ರಂದು ಕೀರ್ತನ- ಸಾಂತ್ವನ- ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ 500 ಮಂದಿ ಅನಾರೋಗ್ಯ ಪೀಡಿತರಿಗೆ ಧನಸಹಾಯ, 280 ಮಂದಿ ಕೊರೊನಾ ವಾರಿಯರ್ಸ್ಗೆ ಸನ್ಮಾನ, ಪೌರಕಾರ್ಮಿಕರಿಗೆ ಗೌರವಾರ್ಪಣೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಿಗೆ ಸನ್ಮಾನ ಸೇರಿಂದತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ತಾನು ದುಡಿದ ಸಂಪಾದನೆಯಲ್ಲಿ ಒಂದು ಭಾಗ ಸಮಾಜ ಸೇವೆ ಮತ್ತು ಗೋ ರಕ್ಷಣೆಗೆ ಮೀಸಲಿಡುವ ಸುರೇಶ್ ಶೆಟ್ಟಿ ಗುರ್ಮೆ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮಳೆ ಬೆಳೆ ಸಂಪಾಯಿತಲೆ ಪರಾಕ್: ಮೈಲಾರದಲ್ಲಿ ಅದ್ಧೂರಿ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತರು