ಉಡುಪಿ: ಮಂಕುತಿಮ್ಮನ ಕಗ್ಗವನ್ನು ಕನ್ನಡಿ ಕೈ ಬರಹದ ಮೂಲಕ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ಗೆ ಅಕ್ಷಿತಾ ಹೆಗ್ಡೆ ಹೆಸರು ಸೇರ್ಪಡೆಯಾಗಿದೆ. ಇವರು ಕಗ್ಗದ 13 ಪದ್ಯಗಳನ್ನು ಆಯ್ಕೆ ಮಾಡಿಕೊಂಡು ಅದರ 52 ಸಾಲುಗಳನ್ನು 45.11 ನಿಮಿಷದಲ್ಲಿ ಬರೆದು ಈ ಸಾಧನೆ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದ ಕುಕ್ಕೆಹಳ್ಳಿ ದೊಡ್ಡಬೀಡು ದಿ.ಸುಭಾಸ್‌ಚಂದ್ರ ಹೆಗ್ಡೆ, ಜಯಲಕ್ಷ್ಮಿ ದಂಪತಿಯ ಪುತ್ರಿಯಾಗಿರುವ ಅಕ್ಷಿತಾ ಹೆಗ್ಡೆ ನಿಟ್ಟೆ ಜಸ್ಟಿಸ್ ಕೆ ಎಸ್ ಹೆಗ್ಡೆ ಇನ್ಸ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಇದೀಗ ಇದೇ ಸಂಸ್ಥೆಯಲ್ಲಿ ಸಂಶೋಧನೆ ವಿಭಾಗದಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಕ್ಷಿತಾ ಹೆಗ್ಡೆ ತನ್ನ ಉತ್ತಮ ಕನ್ನಡ ಕೈ ಬರಹವನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಮಾರ್ಚ್ನಲ್ಲಿ ಕಳುಹಿಸಿದ್ದು, ಕನ್ನಡಿ ಬರಹವನ್ನು ಕಳುಹಿಸುವಂತೆ ಸಲಹೆ ಬಂದಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಇವರು 3-4 ದಿನಗಳಲ್ಲೇ ಕನ್ನಡಿ ಬರಹ ಕಲಿತು ಅದರ ವಿಡಿಯೋ ತುಣುಕನ್ನು ಏಪ್ರಿಲ್ ಮೊದಲ ವಾರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಕಳುಹಿಸಿದ್ದರು. ಈ ಬರಹ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.
"ನನ್ನ ಕನ್ನಡಿ ಕೈ ಬರಹಕ್ಕೆ ಬಹಳ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ ಅನೇಕರು ತುಳು ಭಾಷೆಯಲ್ಲಿ ಬರೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ನನಗೆ ಈ ಸಾಧನೆ ಖುಷಿ ಕೊಟ್ಟಿದೆ. ಗುರುತಿಸಿರುವುದಕ್ಕೆ ಸಂಸ್ಥೆಗೆ ವಂದನೆಗಳು. ತಾಯಿ, ಊರಿನವರು, ಶಿಕ್ಷಕ ವೃಂದ, ಸ್ನೇಹಿತರು, ಸಹೊದ್ಯೋಗಿಗಳು ಸಹಕಾರ ಕೊಟ್ಟಿದ್ದಾರೆ" ಎಂದು ಅಕ್ಷತಾ ಹೆಗ್ಡೆ ಹೇಳಿದರು.
ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಬೇಸತ್ತ ಸ್ವಾಮೀಜಿ.. ಗ್ರಾಮ ಪಂಚಾಯತ್ ಸದಸ್ಯತ್ವಕ್ಕೆ ಪ್ರಣವಾನಂದ ರಾಜೀನಾಮೆ