ಉಡುಪಿ: ಅನ್ಯ ರಾಜ್ಯದಿಂದ ಲಾರಿಯಲ್ಲಿ ಸಾಗಿಸುತ್ತಿದ್ದ 15.65 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಎಎಸ್ಪಿ ಕುಮಾರಚಂದ್ರ ಹೇಳಿದರು.
ಮಾದಕ ದ್ರವ್ಯಗಳ ವ್ಯಸನಕ್ಕೆ ಯುವಜನತೆ ಹೆಚ್ಚು ಬಲಿ ಆಗುತ್ತಿದ್ದಾರೆ. ಮಾರಾಟ ಮಾಡುತ್ತಿರುವವರ ಬಂಧನಕ್ಕೆ ಈಗಾಗಲೇ ವಿಶೇಷ ತಂಡ ರಚಿಸಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.
ಬಹುತೇಕ ಪೊಲೀಸರು ಕೊರೊನಾ ನಿಯಂತ್ರಣದಲ್ಲಿ ತೊಡಗಿದ್ದು, ಇದೇ ಸಂದರ್ಭದಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಸೇವನೆ ಚಟುವಟಿಕೆಗಳು ಹೆಚ್ಚಾಗಿವೆ. ಕೆಲವು ತಿಂಗಳಿನಿಂದ ಜಿಲ್ಲೆಯಲ್ಲಿ ಗಾಂಜಾ ಸಾಗಾಟ ಚುರುಕುಗೊಂಡಿದ್ದು, ಪೊಲೀಸರ ವಿಶೇಷ ತಂಡಗಳು ಕಾರ್ಯಪ್ರವೃತ್ತರಾಗಿವೆ ಎಂದು ಹೇಳಿದರು.
ಕರಾವಳಿಯಲ್ಲಿ ಲಾಕ್ಡೌನ್ ತೆರವುಗೊಳ್ಳುತ್ತಿದ್ದಂತೆ ಗಾಂಜಾ ಸಾಗಾಟ, ಸೇವನೆ ಅಡ್ಡೆಗಳು ಹೆಚ್ಚಾಗುತ್ತಿವೆ. ತೆರವಿನ ಬಳಿಕ ಜಿಲ್ಲೆಗೆ ನಿರಂತರವಾಗಿ ಗಾಂಜಾ ಸಾಗಾಟ ಆಗುತ್ತಿದೆ ಎಂದು ನಾಗರಿಕರು ಹಲವು ದೂರುಗಳನ್ನು ನೀಡಿದ್ದರು ಎಂದರು.
ಕಳೆದ 8 ತಿಂಗಳಲ್ಲಿ 125 ಪ್ರಕರಣ ದಾಖಲಿಸಿ 147 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ 15 ಗಾಂಜಾ ಮಾರಾಟ ಪ್ರಕರಣಳಿಂದ 32 ಮಂದಿ ಬಂಧಿತರಾಗಿದ್ದಾರೆ. ಇನ್ನೂ 110 ಗಾಂಜಾ ಸೇವನೆ ಪ್ರಕರಣಗಳಲ್ಲಿ 115 ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲೆಗೆ ಕೇರಳ ಆಂಧ್ರ ಹಾಗೂ ಉತ್ತರ ಭಾರತದಿಂದ ಗಾಂಜಾ ಸಾಗಾಟ ಆಗುತ್ತಿದೆ ಎಂದು ಹೇಳಿದರು.