ಉಡುಪಿ: ಮೀನುಗಾರಕೆಯನ್ನೇ ನಂಬಿ ಬದುಕು ಸಾಗಿಸೋ ಗ್ರಾಮ ಇದು. ಇಲ್ಲೊಂದು ಮಿನಿ ಜಟ್ಟಿ ಆಗಬೇಕು ಎಂದು ದಶಕಗಳಿಂದ ಇಲ್ಲಿನ ಜನ ಕನಸು ಕಾಣ್ತಾನೆ ಇದ್ದಾರೆ. ವರ್ಷದ ಹಿಂದೆ ಇವರ ಕನಸು ನನಸಾಗುತ್ತೆ ಅನ್ನುವಷ್ಟರಲ್ಲಿ ರಾಷ್ಟ್ರೀಯ ಹಸಿರು ಪ್ರಾಧಿಕಾರ ಇವರ ಕನಸಿಗೆ ತಣ್ಣೀರು ಎರಚಿಬಿಟ್ಟಿದೆ. ಜಟ್ಟಿ ನಿರ್ಮಾಣ, ಹೂಳೆತ್ತುವ ಕಾಮಗಾರಿ ಆರಂಭಗೊಂಡು ಜೋರಾಗಿ ಶುರುವಾಗೋ ಹೊತ್ತಿಗೆ ಬ್ರೇಕ್ ಬಿದ್ದಿದೆ.
ರಾಜ್ಯದಲ್ಲಿ ನೈಸರ್ಗಿಕ ಮೀನುಗಾರಿಕಾ ಬಂದರು ಅನ್ನೊ ಹೆಗ್ಗಳಿಕೆ ಕೋಡಿ ಕನ್ಯಾಣ ಪ್ರದೇಶಕ್ಕೆ ಇದೆ. ಇಲ್ಲಿ ಪ್ರಕೃತಿದತ್ತವಾಗಿ ನಿರ್ಮಾಣಗೊಂಡ ಹಿನ್ನೀರಿನ ಕೊಳದಲ್ಲಿ ಸುಮಾರು 500 ಕ್ಕೂ ಹೆಚ್ಚು ಮೀನುಗಾರಿಕಾ ಬೋಟುಗಳು ಮಳೆಗಾಲದಲ್ಲಿ ಲಂಗರು ಹಾಕುತ್ತವೆ. ಈಗಾಗಲೇ ನೂರು ಮೀಟರ್ ಜಟ್ಟಿ ನಿರ್ಮಾಣವಾಗಿದ್ದು, ಸಂಖ್ಯೆ ಹೆಚ್ಚಾಗಿರುವುದರಿಂದ ಬೋಟು ನಿಲುಗಡೆಗೆ ಒತ್ತಡ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಮೀನು ಖಾಲಿ ಮಾಡಿ ಮಾರುಕಟ್ಟೆ ಒದಗಿಸಲು ಜಟ್ಟಿ ನಿರ್ಮಾಣಕ್ಕೆ ಕಾಮಗಾರಿ ಆರಂಭಗೊಂಡಿತ್ತು. ಹೊಳೆತ್ತುವ ಕಾಮಗಾರಿ ಆರಂಭಗೊಂಡು ಸುತ್ತಲೂ ರಸ್ತೆ ನಿರ್ಮಾಣ, ತಡೆಗೋಡೆ ಆರಂಭಗೊಂಡಿತ್ತು. ಜೋರಾಗಿ ಕಾಮಗಾರಿ ನಡೆಯುತ್ತಿರುವಾಗಲೇ ಮೀನುಗಾರರ ಕನಸು ನನಸಾಗುತ್ತಿರುವ ಸಮಯದಲ್ಲೇ ಕಾಮಗಾರಿಗೆ ಫುಲ್ ಬ್ರೇಕ್ ಬಿದ್ದಿದ್ದು, ಮೀನುಗಾರರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಮಲ್ಪೆ ಬಂದರನ್ನು ಹೊರತು ಪಡಿಸಿದರೆ ಕೋಡಿ ಕನ್ಯಾಣ ಬಂದರನ್ನು ಅಭಿವೃದ್ಧಿಗೊಳಿಸಿದರೆ ಸಾವಿರಾರು ಬೋಟುಗಳನ್ನು ಕಟ್ಟೋ ಅವಕಾಶ ಕೋಡಿ ಕನ್ಯಾಣ ಕೊಳ ಪ್ರದೇಶದಲ್ಲಿದೆ. 2 ವರ್ಷದ ಹಿಂದೆ ಜಟ್ಟಿ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಿಂದ 6 ಕೋಟಿ ರೂಪಾಯಿ ಬಿಡುಗಡೆಯಾಗಿ ಹೂಳೆತ್ತುವ ಕಾಮಗಾರಿ ಆರಂಭಗೊಂಡಿತ್ತು. ಆರಂಭಗೊಂಡಷ್ಟೇ ವೇಗದಲ್ಲಿ ಕಾಮಗಾರಿಗೆ ಬ್ರೇಕ್ ಕೂಡ ಬಿತ್ತು. ಈ ಕಾಮಗಾರಿಯಿಂದ ಪರಿಸರ ನಾಶವಾಗುತ್ತದೆ ಹಾಗೂ ಇದರಿಂದ ಸಿಆರ್ಝಡ್ ನಿಯಮ ಉಲ್ಲಂಘನೆಯಾಗಿದೆ. ಜೊತೆಗೆ ಹೂಗಳನ್ನು ಸಮುದ್ರಕ್ಕೆ ಡಂಪ್ ಮಾಡಿಲ್ಲ ಅನ್ನೋ ಕಾರಣಕ್ಕೆ ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ಆರ್ಟಿಐ ಕಾರ್ಯಕರ್ತರೊಬ್ಬರು ಅರ್ಜಿ ಸಲ್ಲಿಸಿದ ಪರಿಣಾಮ ಕಾಮಗಾರಿ ಮತ್ತೆ ಆರಂಭಗೊಳ್ಳಲೇ ಇಲ್ಲ. ಅರೆಬರೆ ನಿರ್ಮಾಣಗೊಂಡ ಒಂದಿಷ್ಟು ಕೆಲಸಗಳು ಮಳೆಗೆ ಕೊಚ್ಚಿಕೊಂಡು ಹೋಗುತ್ತಿದೆ. ಹೂಳೆತ್ತಿದ ಜಾಗದಲ್ಲಿ ಮತ್ತೆ ಹೂಳು ತುಂಬೋಕೆ ಶುರುವಾಗಿದೆ. ಮೀನುಗಾರಿಕೆ ಮುಗಿಸಿ ಜಟ್ಟಿಗೆ ಬರೋ ಬೋಟುಗಳು ಮತ್ತೆ ದಂಡೆಗೆ ಅಪ್ಪಳಿಸೋ ಆತಂಕ ಮೀನುಗಾರರದ್ದಾಗಿದೆ. ಇದೀಗ ರಾಷ್ಟ್ರೀಯ ಹಸಿರು ಪ್ರಾಧಿಕಾರ ಕಾಮಗಾರಿ ನಡೆಸದಂತೆ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ ಅವೈಜ್ಞಾನಿಕ ಕಾಮಗಾರಿಯೆಂದು ಇದನ್ನು ಪರಿಗಣಿಸಿದ್ದು, ಒಂದಿಷ್ಟು ದಂಡ ತೆರುವಂತೆ ಆದೇಶ ನೀಡಿದ್ದು, ಮೀನುಗಾರರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.
ಸಾಲ ಮಾಡಿ ಬೋಟು ನಿರ್ಮಾಣ ಮಾಡಿಕೊಂಡು ಬದುಕು ಕಟ್ಟಿಕೊಂಡ ಮೀನುಗಾರ ಜಟ್ಟಿಯ ಸಮಸ್ಯೆ ಯಿಂದ ರೋಸಿ ಹೋಗಿದ್ದಾರೆ. ರಾಜ್ಯದ ಇತರ ಗ್ರಾಮಕ್ಕೆ ಅನ್ವಯಿಸದ ಸಿಆರ್ಝಡ್ ನಿಯಮ ಕೋಡಿ ಕನ್ಯಾಣ ಗ್ರಾಮಕ್ಕೆ ಮಾತ್ರನಾ ಎಂದು ಮೀನುಗಾರರು ಅಕ್ರೋಶ ಹೊರ ಹಾಕಿದ್ದಾರೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಗ್ರಾಮಸ್ಥರ ಪರ ಕೆಲಸ ಮಾಡಿಲ್ಲ ಅನ್ನೋ ನೇರ ಆರೋಪ ಮಾಡಿದ್ದು, ಕೂಡಲೇ ಕಾಮಗಾರಿ ಆರಂಭಿಸೋಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.