ಉಡುಪಿ: ರಾಜ್ಯದಲ್ಲಿ ಅಸಮರ್ಪಕ ಆಕ್ಸಿಜನ್ ನಿರ್ವಹಣೆಯಿಂದ ಕೆಲವೆಡೆ ಸಮಸ್ಯೆ ಆಗಿದೆ. ಜಿಲ್ಲೆಗೆ ಸಮರ್ಪಕ ಆಕ್ಸಿಜನ್ ಪೂರೈಕೆ ಆಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಚಾಮರಾಜನಗರ ಘಟನೆ ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಪರಸ್ಪರ ಜಿಲ್ಲೆಯ ಜೊತೆ ಹೊಂದಾಣಿಕೆ ಮಾಡಲಾಗುತ್ತಿದೆ. ಎಲ್ಲ ಸಂಸದರು ದೆಹಲಿಯ ಜೊತೆ ಸಂಪರ್ಕದಲ್ಲಿದ್ದೇವೆ. ಸಾಮರ್ಥ್ಯ ಮೀರಿ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಆಕ್ಸಿಜನ್ ಉತ್ಪಾದನೆ ಹೆಚ್ಚಳ ಮಾಡುವುದೊಂದೇ ಸದ್ಯಕ್ಕಿರುವ ಪರಿಹಾರ ಎಂದರು.
ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಪಿಎಂ ಕೇರ್ ಮೂಲಕ ಪ್ರತಿ ತಾಲೂಕಿನಲ್ಲೂ ಆಕ್ಸಿಜನ್ ಉತ್ಪಾದನೆಗೆ ಹಣಕಾಸು ನೆರವು ನೀಡುತ್ತಿದೆ. ತಾಲೂಕು ಆಸ್ಪತ್ರೆಯಲ್ಲಿ ಆಕ್ಷಿಜನ್ ಉತ್ಪಾದನೆಗೆ ಒತ್ತು ನೀಡಲಾಗಿದೆ. ಮೂರನೇ ಅಲೆ ಇದಕ್ಕಿಂತ ಕೆಟ್ಟದಾಗಿರುತ್ತೆ ಎಂಬುದನ್ನು ಅರಿತಿದ್ದೇವೆ. ಹೀಗಾಗಿ ನಾಲ್ಕು ಪಟ್ಟು ಹೆಚ್ಚು ರೋಗಿಗಳನ್ನು ನಿಭಾಯಿಸಲು ಕ್ರಮ ರೂಪಿಸುತ್ತೇವೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಬೆಡ್ ಹೆಚ್ಚಳ, ಹಾಸ್ಟೆಲ್ಗಳಲ್ಲಿ ರೋಗಿಗಳ ಚಿಕಿತ್ಸೆಗೆ ಕೋವಿಡ್ ಸೆಂಟರ್ ತೆರೆಯುತ್ತೇವೆ ಎಂದ ಅವರು, ದೆಹಲಿಯ ಪರಿಸ್ಥಿತಿ ದಿನೇ ದಿನೆ ಬಿಗಡಾಯಿಸುತ್ತಿದೆ. ಆರೋಗ್ಯ ವ್ಯವಸ್ಥೆ ಬುಡಮೇಲಾಗಿದೆ. ಹಾಗಾಗಿ ತುರ್ತು ಆರೋಗ್ಯ ಸೇವೆ ನೀಡುವ ದೃಷ್ಟಿಯಿಂದ ಮಣಿಪಾಲ್ ನರ್ಸ್ಗಳ ತಂಡವೊಂದು ದೆಹಲಿಗೆ ತೆರಳಿದೆ ಎಂದರು.
ಕೆಎಂಸಿ ಸಂಸ್ಥೆಯ ಸಹ ಸಂಸ್ಥೆ, ದಿಲ್ಲಿಯ ಮಣಿಪಾಲ ದ್ವಾರಕಾ ಆಸ್ಪತ್ರೆಯ ಬೇಡಿಕೆ ಮೇರೆಗೆ ಮಣಿಪಾಲದ 19 ಮಂದಿ ದಾದಿ (ನರ್ಸ್)ಯರ ಮೊದಲ ತಂಡ ದೆಹಲಿಗೆ ತೆರಳಿದೆ. ಸೋಮವಾರ ದ್ವಾರಕಾ ಆಸ್ಪತ್ರೆ ಆಡಳಿತ ಮಂಡಳಿ ನರ್ಸಿಂಗ್ ವೃತ್ತಿಪರರ ಅವಶ್ಯಕತೆಯ ಕೋರಿಕೆಯನ್ನು ಮಣಿಪಾಲ ದ್ವಾರಕಾ ಆಸ್ಪತ್ರೆ ನೀಡಿತ್ತು. ಈ ತಂಡವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಚಪ್ಪಾಳೆ ತಟ್ಟಿ ಬರಮಾಡಿಕೊಳ್ಳಲಾಯ್ತು. ಸಾಂಕ್ರಾಮಿಕ ಸಂಕಷ್ಟ ಕಾಲದಲ್ಲಿ ಈ ನರ್ಸ್ ಗಳ ಸೇವೆ ಗಮನ ಸೆಳೆದಿದೆ ಎಂದು ತಿಳಿಸಿದರು.
ಓದಿ: ಬಂಗಾಳ ಸರ್ಕಾರವೇ ಗೂಂಡಾಗಳಿಗೆ ಬೆಂಬಲವಾಗಿ ನಿಂತಿದೆ: ದೀದಿ ವಿರುದ್ಧ ಸಿ.ಟಿ.ರವಿ ಕಿಡಿ