ಉಡುಪಿ: ಬದುಕುವ ಛಲದ ಮುಂದೆ ಯಾವುದು ಅಡ್ಡಿ ಬರಲ್ಲ. ಹಾಗೆಯೇ ಆತ್ಮವಿಶ್ವಾಸ ಗಟ್ಟಿಯಾಗಿದ್ದರೆ ಯಾವ ಅಂಗಹೀನತೆ ಶಾಪವಲ್ಲ. ಎಷ್ಟು ಸವಾಲುಗಳು ಎದುರಾದರೂ ಎದುರಿಸಿ ಜೀವನ ನಡೆಸಬಹುದು ಎಂಬುದಕ್ಕೆ ಉಡುಪಿಯ ಬೈಂದೂರಿನ ಬಾಲಕೃಷ್ಣನ್ ಎಂಬ ಹಠಯೋಗಿ ನೈಜ ಉದಾಹರಣೆ.
ಮೂಲತಃ ಕೇರಳಿಗನಾದರೂ ಬೈಂದೂರು ತಾಲೂಕಿನ ಜಡ್ಕಲ್ನಲ್ಲಿ ಬಾಲಕೃಷ್ಣನ್ ವಾಸವಾಗಿದ್ದು, ಇಳಿವಯಸ್ಸಾದರೂ ಅವರಲ್ಲಿ ಲವಲವಿಕೆ ಬತ್ತಿಲ್ಲ. ಮನೆಯ ಮುಂದೆ ನರ್ಸರಿಯನ್ನು ನಿರ್ಮಾಣ ಮಾಡಿ, ಅದಕ್ಕೆ ಮಣ್ಣು, ಗೊಬ್ಬರ ಹಾಕುವುದು, ನೀರು ಚಿಮುಕಿಸುವುದು ಹೀಗೆ ಪ್ರತಿಯೊಂದು ಕಾರ್ಯಗಳನ್ನು ಅವರೇ ಮಾಡುತ್ತಾರೆ.
ಬಾಲಕೃಷ್ಣನ್ ಅವರು ಬಾಲ್ಯದಿಂದಲೇ ಅಂಗವೈಕಲ್ಯಕ್ಕೆ ತುತ್ತಾಗಿದ್ದು, ಆದರೆ ಯಾವತ್ತು ಕೂಡ ಅವರಿಗೆ ತಮ್ಮ ವೈಕಲ್ಯದ ಕೊರಗು ಬಾಧಿಸಸಿಲ್ಲ. ಶೇ.80 ರಷ್ಟು ದಿವ್ಯಾಂಗತೆಗೆ ತುತ್ತಾಗಿರುವ ಇವರು, ಆರಂಭದಲ್ಲಿ ರೆಡಿಯೋ ರಿಪೇರಿ ಸೇರಿದಂತೆ ಬೇರೆ ಕೆಲಸ ಮಾಡಿಕೊಂಡಿದ್ದರು. ಬಳಿಕ ಸಂಪೂರ್ಣವಾಗಿ ಕೃಷಿಯತ್ತ ಮುಖ ಮಾಡಿ, ಒಂದು ಎಕರೆ ಪ್ರದೇಶದಲ್ಲಿ ನರ್ಸರಿ ಪ್ಲಾಂಟೇಷನ್ ಆರಂಭಿಸಿ ಪ್ರತಿ ವರ್ಷ ಗಿಡ ನೆಟ್ಟು ಮಾರಾಟ ಮಾಡಿ ಸ್ವಾವವಲಂಬನೆಯ ಜೀವನ ನಡೆಸುತ್ತಿದ್ದಾರೆ.
ತಮ್ಮ ಒಂದು ಎಕರೆ ಜಾಗದಲ್ಲಿ ಪ್ರತಿವರ್ಷ ಐದರಿಂದ ಆರು ಸಾವಿರ ನಾನಾ ಜಾತಿಯ ಗಿಡಗಳನ್ನು ಬೆಳೆಸಿತ್ತಿದ್ದಾರೆ. ಈ ಮೂಲಕ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದು, ಇದೀಗ ಇವರು ಬೆಳೆಸಿದ ಹಸಿರು ಕಾನನವಾಗಿ ಕಂಗೊಳಿಸುತ್ತಿದೆ. ಗುಣಮಟ್ಟದ ಫಸಲು ನೀಡುವ ರಬ್ಬರ್, ಕಾಳುಮೆಣಸು, ಅಡಕೆ, ಗೇರು, ಮಾವು ಔಷಧೀಯ ಸಸ್ಯಗಳನ್ನು ಬೆಳೆಸುತ್ತಾರೆ.
ಈ ವಿಶೇಷ ಚೇತನ ಕೃಷಿಕನಿಗೆ ಕರ್ನಾಟಕ ಇಂಟಿಗ್ರೇಟೆಡ್ ಡೆವೆಲಪ್ ಮೆಂಟ್ ಸೊಸೈಟಿಯಿಂದ ಉತ್ತಮ ರೈತ ಪ್ರಶಸ್ತಿ ಬಂದಿದೆ. ಆದರೆ ಈ ವ್ಯಕ್ತಿಯೇ ಸಮಾಜಕ್ಕೆ ಒಂದು ಪ್ರಶಸ್ತಿ. ಇವರಂತೆ ಬದುಕೋದು ಸುಲಭದ ಮಾತಲ್ಲ. ಇವನ ಜೀವನ ಶೈಲಿಯನ್ನು ಕಂಡಾಗ, ಎಲ್ಲಾ ಇದ್ದು ನಾವೇನು ಮಾಡಿದ್ದೇವೆ ಎಂಬ ಪ್ರಶ್ನೆ ಮೂಡದೇ ಇರಲ್ಲ.