ಉಡುಪಿ: ಕುಂದಾಪುರ ಮಿನಿ ವಿಧಾನಸೌಧದ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಸಿಮೆಂಟ್ ಸ್ಲಾಪ್ ಕಳಚಿ ಬಿದ್ದ ಪರಿಣಾಮ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
ನಾರಾಯಣ ಬಿಲ್ಲವ ಗಾಯಗೊಂಡ ಸಿಬ್ಬಂದಿ. ಇದಕ್ಕೂ ಮೊದಲು ಒಂದು ಬಾರಿ ಸ್ಲಾಪ್ ಕಳಚಿ ಬಿದ್ದಿತ್ತು. ಮತ್ತೆ ಕಳಚಿದ ಕಾರಣ ಸಿಬ್ಬಂದಿ ಆತಂಕದಲ್ಲಿದ್ದಾರೆ.
ಉದ್ಘಾಟನೆಗೊಂಡ ಮರುವರ್ಷವೇ ಸೋರಿತ್ತು: 2015ರಲ್ಲಿ ಹುಬ್ಬಳ್ಳಿಯ ಶಂಕರ್ ಕನ್ಸ್ಟ್ರಕ್ಷನ್ ಕಂಪನಿಯಿಂದ ₹ 5 ಕೋಟಿ ವೆಚ್ಚದಲ್ಲಿ ಈ ಮಿನಿ ವಿಧಾನಸೌಧವನ್ನು ನಿರ್ಮಿಸಲಾಗಿತ್ತು. ಕಟ್ಟಡ ಉದ್ಘಾಟನೆಗೊಂಡ ಮರು ವರ್ಷವೇ ಸೋರುತಿತ್ತು. ಕಳೆದ ವರ್ಷ ಕಟ್ಟಡದಲ್ಲಿ ಶೇ.50 ಭಾಗ ಸೋರಿಕೆಯಾಗುತ್ತಿತ್ತು. ಬಳಿಕ ಅಲ್ಲಲ್ಲಿ ಸಿಮೆಂಟ್ ಸ್ಲಾಪ್ ಕಳಚಿ ಬೀಳಲು ಆರಂಭವಾಯಿತು.ಕಂದಾಯ ಇಲಾಖೆಯ ಕೆಲಸಕ್ಕಾಗಿ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡ್ತಾರೆ. ಆದರೀಗ ಕಚೇರಿ ಸಿಬ್ಬಂದಿ ಜೊತೆಗೆ ಸಾರ್ವಜನಿಕರೂ ಆತಂಕದಲ್ಲಿದ್ದಾರೆ.
ಗುತ್ತಿಗೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ: ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಗುತ್ತಿಗೆ ಪಡೆದಿದ್ದ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಿಬ್ಬಂದಿಗಳಿಂದ ಪ್ರತಿಭಟನೆ: ಕಚೇರಿಯಲ್ಲಿ ಕೆಲಸ ಮಾಡಲು ಜೀವ ಭಯ ಉಂಟಾಗಿದೆ. ಕಳಪೆ ಕಾಮಗಾರಿಯಿಂದ ಸಂಪೂರ್ಣ ಬಿರುಕು ಬಿಟ್ಟಿದೆ. ಬೇರೆ ಕಚೇರಿ ವ್ಯವಸ್ಥೆ ಮಾಡಿ ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.