ಚಿಕ್ಕಮಗಳೂರು: ಗೋ ಬ್ಯಾಕ್ ಶೋಭಾ ಕರಂದ್ಲಾಜೆ... ಗೋ ಬ್ಯಾಕ್ ಶೋಭಾ ಕರಂದ್ಲಾಜೆ..' ಇದು ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆಯಾಗಿದ್ದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಕೇಳಿ ಬಂದಿದ್ದ ಆಕ್ರೋಶದ ಕೂಗು. ಆದ್ರೆ, ಪಕ್ಷದಲ್ಲಿದ್ದ ಎಲ್ಲಾ ವಿರೋಧಗಳನ್ನು ಮೆಟ್ಟಿನಿಂತ ಅವರು ಮತ್ತೊಮ್ಮೆ ವಿಜಯದ ಮಾಲೆ ಧರಿಸಿದ್ದಾರೆ. ಈ ಮೂಲಕ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಮೋದ್ ಮಧ್ವರಾಜ್ ಅವರಿಗೆ ಭಾರಿ ಮುಖಭಂಗವಾಗಿದೆ.
ಶೋಭಾ ಗೆಲುವಿನ ಗುಟ್ಟೇನು?
ಈ ಬಾರಿ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಗೆಲುವು ಅಷ್ಟೊಂದು ಸಲೀಸಾಗಿರಲಿಲ್ಲ. ಉಡುಪಿ-ಚಿಕ್ಕಮಗಳೂರಿನ ಕದನ ಕಣ ಸಾಕಷ್ಚು ಜಿದ್ದಾಜಿದ್ದಿನಿಂದ ಕೂಡಿತ್ತು. ಬಿಜೆಪಿ ಭದ್ರಕೋಟೆ ಕೈ ಜಾರಿ ಹೋಗದಂತೆ ತಡೆಯಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಪರ ನಿಂತಿದ್ದರು. ಯಾರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಶೋಭಾ ಮಾತ್ರ ಮೋದಿಗೆ ವೋಟು ಕೊಡಿ, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ಅಂತ 'ನಮೋ' ಹೆಸರಿನಲ್ಲಿ ಬಿರುಸಿನ ಪ್ರಚಾರ ಮಾಡಿದ್ದರು. ಯುವ ಜನತೆ ಕೂಡ ಶೋಭಾ ಗೋ ಬ್ಯಾಕ್ ಅಭಿಯಾನವನ್ನು ಮರೆತು ಮೋದಿಯನ್ನು ಗೆಲ್ಲಿಸಬೇಕೆಂಬ ಹಠದಲ್ಲಿ ಈ ಬಾರಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವೆಯಾಗಿದ್ದ ಶೋಭಾ, ನಂತ್ರ 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಂಸದೆಯಾಗಿದ್ದರು. ಇದೀಗ ಮತ್ತೊಮ್ಮೆ ಗೆಲುವು ಪಡೆದಿದ್ದಾರೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಅವರು ಕಿವಿಯಾಗಬೇಕು ಅನ್ನೋದು ಜನಸಾಮಾನ್ಯರ ಆಶಯ.