ಉಡುಪಿ/ಮಣಿಪಾಲ: ಶಿಕ್ಷಣ ಮತ್ತು ಉದ್ಯೋಗಕ್ಕೆ ಯಾವುದೇ ಧರ್ಮವಿಲ್ಲ. ದಯವಿಟ್ಟು ಹೆಣ್ಣುಮಕ್ಕಳು ಕಾಲೇಜಿಗೆ ಬನ್ನಿ, ಪರೀಕ್ಷೆ ಬರೆಯುವ ಮೂಲಕ ನಿಮ್ಮ ಕಾಲ ಮೇಲೆ ನಿಂತುಕೊಳ್ಳಿ ಎಂದು ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.
ಮಣಿಪಾಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಜಾಬ್ ವಿವಾದದ ಹಿಂದೆ ಯಾವುದೋ ಸಂಘಟನೆಗಳು ಪಿತೂರಿ ನಡೆಸಿವೆ ಎಂದು ಹೈಕೋರ್ಟ್ ಹೇಳಿದೆ. ನಾನು ಗಮನಿಸಿದ ಹಾಗೆ ಶ್ರೀಮಂತ ಹೆಣ್ಣುಮಕ್ಕಳು ಹಿಜಾಬ್ ಇಲ್ಲದೆಯೂ ಹೊರ ಹೋಗುತ್ತಾರೆ. ಆದರೆ, ಬಡ ಹೆಣ್ಣುಮಕ್ಕಳಿಗೆ ಹಿಜಾಬ್ ಹಾಕಿಯೇ ಹೊರ ಕಳಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ಇದಕ್ಕೆಲ್ಲ ಕಿವಿಕೊಡದೇ ಎಲ್ಲರೂ ಕಾಲೇಜಿಗೆ ಬರಬೇಕು. ಕೋರ್ಟ್ ತೀರ್ಪಿನ ನಂತರವೂ ಸಂವಿಧಾನಕ್ಕೆ ಅಗೌರವ ತೋರಿಸುವುದನ್ನು ಗಮನಿಸಿದ್ದೇವೆ ಎಂದರು.
ನವೀನ್ ಮೃತದೇಹ ತರುವ ಪ್ರಯತ್ನ ಮಾಡಲಾಗುತ್ತಿದೆ: ಉಕ್ರೇನ್ನಲ್ಲಿ ಸಾವನ್ನಪ್ಪಿದ್ದ ನವೀನ್ ಮೃತದೇಹವನ್ನು ಅಲ್ಲಿಂದ ತರುವ ಪ್ರಯತ್ನ ನಡೆಯುತ್ತಿದೆ. ಅಲ್ಲಿ ಅವರ ಮೃತದೇಹವನ್ನು ಕಾಯ್ದಿರಿಸಲಾಗಿದೆ. ಉಕ್ರೇನ್ನಲ್ಲಿ ಈಗಲೂ ಯುದ್ಧ ನಡೆಯುತ್ತಿದೆ. ಯುದ್ಧಪೀಡಿತ ರಾಷ್ಟ್ರದಿಂದ ಮೃತದೇಹ ತರುವುದು ಅಷ್ಟು ಸುಲಭದ ಕೆಲಸವಲ್ಲ. ಅನಾರೋಗ್ಯದಿಂದ ಸಾವನ್ನಪ್ಪಿದ ಯುವಕನ ಮೃತದೇಹವನ್ನು ಉಕ್ರೇನ್ನಿಂದ ತರಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಕೇಂದ್ರ ಸರ್ಕಾರ ಉಕ್ರೇನ್ನಲ್ಲಿದ್ದ 20 ಸಾವಿರ ಜನರನ್ನು ಬೇರೆ ಬೇರೆ ರಾಷ್ಟ್ರಗಳ ನೆರವಿನಿಂದ ಕರೆತಂದಿದೆ. ಆದರೆ, ಮೃತದೇಹದ ವಿಷಯದಲ್ಲಿ ಸ್ವಲ್ಪ ತಡವಾಗಿದೆ. ಈ ಸಂಬಂಧ ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ನಿರ್ಣಯವಾಗಿದೆ. ಮೃತದೇಹವನ್ನು ತಾಯ್ನಾಡಿಗೆ ತರುವ ಬಗ್ಗೆ ಎಲ್ಲ ಪ್ರಯತ್ನವನ್ನ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಮರಿಯುಪೋಲ್ ಥಿಯೇಟರ್ ಮೇಲೆ ಬಾಂಬ್ ದಾಳಿ: ಅವಶೇಷಗಳಡಿ ಸಿಲುಕಿದ 1300 ಕ್ಕೂ ಹೆಚ್ಚು ನಾಗರಿಕರು,130 ಮಂದಿ ರಕ್ಷಣೆ