ಉಡುಪಿ: ಶಿರ್ವ ಚಿಕ್ಕ ಪ್ರದೇಶವಾದ್ರೂ ಅರಬ್ ದೇಶಗಳ ವ್ಯವಹಾರದ ಮಟ್ಟಿಗೆ ದೊಡ್ಡ ಹೆಸರು. ಇಲ್ಲಿ ಇರೋದು ಒಂದೇ ಸಾಲು ಪೇಟೆ. ಇಲ್ಲಿ ಹೊಸ ಅಂಗಡಿ ಅಂತ ಬಟ್ಟೆ, ಹೊಲಿಗೆ ಸಾಮಾಗ್ರಿ, ಸ್ಟೇಶನರಿ ಅಂಗಡಿ ಇದೆ. ಇದರ ಮಾಲೀಕರೇ ಈ ಶಿವಾನಂದ ಕಾಮತ್. ಎಲ್ರೂ ಇವರನ್ನು ಶಿವಣ್ಣ ಅಂತಾನೇ ಕರೆಯುತ್ತಾರೆ.
ತಮಗಿದ್ದ ಒಬ್ಬ ಮಗ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಆದ್ರೆ ಈ ಶಿವಣ್ಣ ದಂಪತಿ ಶಿಕ್ಷಣದಿಂದ ವಂಚಿತರಾದ ಅದೆಷ್ಟೋ ಬಡ ಮಕ್ಕಳನ್ನು ಕರೆಸಿ ತಮ್ಮ ಮನೆಯಲ್ಲಿ ಉಚಿತ ಊಟ, ವಸತಿ ನೀಡಿ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಬಿಡುವಿನ ಸಮಯದಲ್ಲಿ ಆ ಮಕ್ಕಳು ಇವರ ಅಂಗಡಿಯಲ್ಲಿ ಸೇವೆ ಮಾಡುತ್ತಾರೆ. ಅದು ಕಡ್ಡಾಯ ಏನಲ್ಲ.
ಶಿವಣ್ಣ ಅವರ ಪತ್ನಿಯನ್ನು ಈ ಮಕ್ಕಳು ಅಮ್ಮ ಅಂತನೇ ಕರೆಯುತ್ತಾರೆ. ಇವರಲ್ಲಿ ಕಲಿತ ಮಕ್ಕಳು ಕೆಲವರು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಕೆಲವರು ಬೆಂಗಳೂರಿನಲ್ಲಿದ್ದಾರೆ. ಇನ್ನು ಕೆಲವರು ಇಲ್ಲೇ ಹೋಟೆಲ್, ಕ್ಯಾಂಟೀನ್ ನಡೆಸಿಕೊಂಡಿದ್ದಾರೆ. ಎಲ್ಲಾ ಜಾತಿ ಧರ್ಮದ ಶಿಕ್ಷಣ ವಂಚಿತ ಮಕ್ಕಳನ್ನು ಶಿವಣ್ಣ ದಂಪತಿ ಪ್ರೀತಿಯಿಂದ ಸಾಕಿ ಆದರ್ಶವಂತರಾಗಿ ಮಾಡುತ್ತಿದ್ದಾರೆ.
ಇಷ್ಟೇ ಅಲ್ಲದೆ ಸದಾ ಸರಳ ಸ್ವಭಾವದ ಶಿವಣ್ಣ ಎಲ್ಲರಿಗೂ ಅಚ್ಚುಮೆಚ್ಚು. ತಾನೊಬ್ಬ ಶಿಕ್ಷಕನಾಗಬೇಕು ಎಂಬ ಆಸೆ ಇಟ್ಕೊಂಡಿದ್ರಂತೆ. ಆದ್ರೆ ಅದು ಆಗಿಲ್ಲ ಅನ್ನೋ ಕಾರಣದಿಂದ ತಮ್ಮ ಮನೆಯಲ್ಲಿಯೇ ಅದೆಷ್ಟೋ ಮಕ್ಕಳಿಗೆ ಆಶ್ರಯ ನೀಡಿ ಶಿಕ್ಷಣ ನೀಡುತ್ತಿದ್ದಾರೆ. ಜೊತೆಗೆ ಬಿಡುವಿದ್ದಾಗ ಸ್ಥಳೀಯ ಹಿಂದೂ ಪ್ರಾಥಮಿಕ ಶಾಲೆಗೆ ಹೋಗಿ ಅಲ್ಲಿ ಮಕ್ಕಳಿಗೆ ಪಾಠ ಮಾಡ್ತಾರೆ. ಭಜನೆ ಹಾಡ್ತಾರೆ, ಅವರ ಜೊತೆ ಖುಷಿಯಾಗಿ ಬೆರೆತು ಸಂತೋಷ ಪಡ್ತಾರೆ. ಈ ಕಾರಣದಿಂದ ಅವರನ್ನು ಮಕ್ಕಳು ಪ್ರೀತಿಯಿಂದ ಯಾವಾಗ ಬರ್ತೀರಿ ಸರ್ ಅಂತಾ ಕೇಳ್ತಾರಂತೆ. ಹೀಗೆ ತಮ್ಮ ಬದುಕಿನ ಗಳಿಕೆಯನ್ನು ಇತರರ ಏಳಿಗೆಗೆ ವಿನಿಯೋಗಿಸುವ ಈ ದಂಪತಿಯ ಶಿಕ್ಷಣ ಸೇವೆ ಮಾದರಿಯಾಗಿದೆ.
ಇಂದಿನ ದಿನಗಳಲ್ಲಿ ಫೀಸ್ ಡೊನೇಶನ್ ಅಂತಾ ಮನೆ ಮಕ್ಕಳಿಗೆ ಶಿಕ್ಷಣ ಕೊಡಿಸೋದೂ ಕಷ್ಟ ಇದೆ. ಅದ್ರಲ್ಲೂ ಎಲ್ಲರೂ ಶಿಕ್ಷಣ ಪಡಿಬೇಕು, ಅದಕ್ಕೆ ನಮ್ಮಿಂದಾದ ಸಹಾಯ ನಾವೆಲ್ಲರೂ ಮಾಡಬೇಕು ಅನ್ನೋ ಮನೋಭಾವದ ಶಿವಣ್ಣ ದಂಪತಿಗೆ ಒಂದು ಸಲಾಂ.