ಉಡುಪಿ : ಶಿರ್ವ ಚರ್ಚ್ನ ಕಿರಿಯ ಧರ್ಮಗುರು ಫಾದರ್ ಮಹೇಶ್ ಡಿಸೋಜ ನಿಗೂಢ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆಗ್ರಹಿಸಿ ಭಕ್ತರು ಪ್ರತಿಭಟನೆ ಮುಂದುವರಿಸಿದ್ದು, ಶಿರ್ವ ಪೇಟೆಯ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟ ನಡೆಸಿದ್ದಾರೆ.
ಕಳೆದ ಶನಿವಾರ ಮತ್ತು ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು, ಚರ್ಚ್ ಮುಂಭಾಗ ಗದ್ದಲವೆಬ್ಬಿಸಿ, ಮಹೇಶ್ ಡಿಸೋಜ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಹಿರಿಯ ಗುರುಗಳ ಬಗ್ಗೆ ಆರೋಪ ಮಾಡಿ, ಹಣಕಾಸು ವ್ಯವಹಾರದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿ ಚರ್ಚ್ನ ಗಂಟೆ ಬಾರಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು.
ಸಂಧಾನ ನಡೆಸಲು ಬಂದ ಬಿಷಪ್ ವಿರುದ್ಧವೂ ಧಿಕ್ಕಾರ ಕೂಗಿದ್ದರು. ಬಳಿಕ ಪೊಲೀಸರ ಮಧ್ಯವೇಶದಿಂದ ಪರಿಸ್ಥಿತಿ ತಣ್ಣಗಾಗಿತ್ತು. ಇವತ್ತು ಶಿರ್ವ ಚರ್ಚ್ನ ಭಕ್ತರು ಶಾಂತಿಯುತ ಪ್ರತಿಭಟನೆ ಮಾಡಿದ್ದಾರೆ. ಚರ್ಚ್ನಿಂದ ಶಿರ್ವ ಠಾಣೆಯವರಗೆ ಮೌನ ಪ್ರತಿಭಟನೆ ನಡೆಸಿದ ಭಕ್ತರು ಮನವಿ ನೀಡಿ ಫಾದರ್ ಸಾವಿಗೆ ಪ್ರಚೋದನೆ ನೀಡಿದವರನ್ನು ಬಂಧಿಸುವಂತೆ ಆಗ್ರಹಿಸಿದರು.