ಉಡುಪಿ: ಜಿಲ್ಲೆಯಲ್ಲಿರುವ ಎಲ್ಲಾ ಪ್ರೌಢಶಾಲೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ಸೋಮವಾರದಿಂದ (ನಾಳೆಯಿಂದ) ಫೆಬ್ರವರಿ 19 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿದ ರಜೆಯ ನಂತರ ಸೋಮವಾರ ಶಾಲೆಗಳು ಪುನರಾರಂಭವಾಗುತ್ತಿದೆ. ಅಲ್ಲದೇ, ನಾಳೆ ವಿವಾದ ಸಂಬಂಧ ಹೈಕೋರ್ಟ್ ತೀರ್ಪು ಬರುವ ಸಾಧ್ಯತೆಯಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಆದೇಶವು ಫೆಬ್ರವರಿ 14 ರಂದು ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 19 ರ ಸಂಜೆ 6 ಗಂಟೆಯ ವರೆಗೆ ಜಾರಿಯಲ್ಲಿರುತ್ತದೆ.
ಎಲ್ಲಾ ಪ್ರೌಢಶಾಲೆಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಆದೇಶವನ್ನು ಹೊರಡಿಸಿಲಾಗಿದೆ.
ಇದನ್ನೂ ಓದಿ: ಹಿಜಾಬ್ ಧರಿಸಿದ ಹುಡುಗಿ ಮುಂದೊಂದು ದಿನ ಭಾರತದ ಪ್ರಧಾನಿಯಾಗ್ತಾಳೆ: ಓವೈಸಿ
ಆದೇಶದ ಪ್ರಕಾರ, ಶಾಲಾ ಪರಿಧಿಯ ಸುತ್ತ ಐದು ಅಥವಾ ಹೆಚ್ಚಿನ ಜನರು ಗುಂಪುಗೂಡುವಂತಿಲ್ಲ. ಪ್ರತಿಭಟನೆಗಳು ಮತ್ತು ರ್ಯಾಲಿಗಳು ಸೇರಿದಂತೆ ಎಲ್ಲಾ ರೀತಿಯ ಸಭೆಗಳನ್ನು ನಿಷೇಧಿಸಲಾಗಿದೆ. ಪ್ರಚೋದಿಸುವ ಘೋಷಣೆಗಳು, ಹಾಡುಗಳು ಮತ್ತು ಭಾಷಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.