ಉಡುಪಿ : ಇಲ್ಲಿನ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ನಿತ್ಯ ಈಜುವ ಒಂದಷ್ಟು ಯುವಕರು ಹೊಸ ಸಾಹಸ ಮಾಡಿದ್ದಾರೆ.
ಕರಂಬಳ್ಳಿ ಸ್ವಿಮ್ಮರ್ಸ್ ತಂಡದ 14 ಜನ ಸದಸ್ಯರು ಬೆಳಗ್ಗೆ 6.30ಕ್ಕೆ ಉಡುಪಿಯ ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಕಡಲ ಕಿನಾರೆವರೆಗೆ ಈಜಿ ಹೊಸ ದಾಖಲೆ ಬರೆದಿದ್ದಾರೆ. ಸಮುದ್ರಕ್ಕೆ ಕಸ, ಕಲ್ಮಶ ಎಸೆಯದೆ ಪರಿಸರ ರಕ್ಷಣೆಯ ಸಂದೇಶ ಸಾರಲು 3.09 ಕಿ.ಮೀ ದೂರ ಈಜಿ ದಡ ಸೇರಿದ್ದಾರೆ.
ಇಂದು ಮುಂಜಾನೆ ಸಮುದ್ರದ ಅಲೆಗಳ ಸೆಳೆತ ತೀವ್ರವಾಗಿ ಇದ್ದುದರಿಂದ ಸುತ್ತಿ ಬಳಸಿ ಈಜಿ ದಡ ಸೇರುವುದು ಸವಾಲಾಗಿತ್ತು. ಅಂದಾಜು ಎರಡು ಮುಕ್ಕಾಲು ಗಂಟೆಗಳ ಕಾಲ ನಿರಂತರ ಕಡಲಿನಲ್ಲಿ ಈಜುವುದು ಸಾಹಸವೇ ಆಗಿತ್ತು.
ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಸಂಜೆ ಈಜಾಡುವ ಮತ್ತು ಆಸಕ್ತರಿಗೆ ಈಜು ಕಲಿಸುವ ಈ ತಂಡದಲ್ಲಿ ನಾಲ್ಕು ವರ್ಷದ ಪುಟಾಣಿಗಳಿಂದ ಹಿಡಿದು 70 ವರ್ಷದ ಹಿರಿಯರೂ ಜೊತೆಗಿದ್ದರು. ಈ ತಂಡ ಎಲ್ಲರಿಗೂ ಉಚಿತ ತರಬೇತಿ ನೀಡುತ್ತಿದೆ. ಈಜಿನ ಜೊತೆಗೆ ಕೆರೆಯ ಸ್ವಚ್ಛತೆ, ನೀರು, ಪರಿಸರದ ಸಂರಕ್ಷಣೆಯಲ್ಲೂ ಕರಂಬಳ್ಳಿ ಸ್ವಿಮ್ಮರ್ಸ್ ಕಾಳಜಿ ತೋರಿದ್ದಾರೆ.
ಇದನ್ನೂ ಓದಿ.. ನಮಗೆ ತಿಳಿಯದೇ ಕೊರೊನಾ ಬಂದು ಹೋಗುತ್ತಿದೆಯಂತೆ!