ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಬಹಳಷ್ಟು ಜಾಸ್ತಿ ಆಗ್ತಾ ಇದೆ. ಸಮುದಾಯಕ್ಕೆ ಕೋವಿಡ್ ಹರಡಿರುವ ಸೂಚನೆಗಳು ಕಂಡು ಬರುತ್ತಿವೆ. ನಮಗೆ ಫ್ರಂಟ್ಲೈನ್ ವಾರಿಯರ್ಗಳ ಕೊರತೆ ಕಾಡುತ್ತಿದ್ದು, ಇನ್ನಷ್ಟು ಸ್ವಯಂ ಸೇವಕರ ಅಗತ್ಯವಿದೆ. ಯಾರಾದರೂ ಮೃತರಾದ್ರೆ ಅಂತ್ಯಸಂಸ್ಕಾರ ನಡೆಸಲು ಸ್ವಯಂ ಸೇವಕರು ಬೇಕು. ಪಾಸಿಟಿವ್ ಬಂದವರನ್ನು ಸಾಗಿಸಲು ಯುವಕರು ಬೇಕು. ಆ್ಯಂಬುಲೆನ್ಸ್ ನಲ್ಲಿ ಶಿಫ್ಟ್ ಮಾಡಲು ಸ್ವಯಂಸೇವಕರು ಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಫ್ರಂಟ್ಲೈನ್ ವಾರಿಯರ್ಗಳಾಗಿ ತಂಡ ಸಿದ್ಧ ಮಾಡಬೇಕಿದೆ. ಈ ತಂಡಕ್ಕೆ ಆರೋಗ್ಯವಂತ ಯುವಕರ ಅಗತ್ಯವಿದೆ. ಮನೆಯಲ್ಲಿ ಹಿರಿಯರಿಂದ ದೂರವಿರಲು ಅವಕಾಶವಿರುವ ಯುವಕರು ಬೇಕು. ಸ್ವಯಂ ಸೇವಕರಾಗಲು ಆಸಕ್ತ ಯುವಕರು ಹೆಸರು ನೋಂದಾಯಿಸಿಕೊಳ್ಳಿ. ಯುವಕರ ತಂಡಕ್ಕೆ ಸೂಕ್ತ ತರಬೇತಿ ನೀಡಲಾಗುವುದು. ಸೋಂಕು ಬರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ತರಬೇತಿ ನೀಡ್ತೇವೆ ಎಂದರು.
ಇನ್ನು ರಾತ್ರಿ-ಹಗಲು ಯಾವಾಗಲಾದರೂ ಕರೆ ಬಂದರೂ ಕೆಲಸ ಮಾಡಲು ಸಿದ್ಧವಿರಬೇಕು. ಈಗಾಗಲೇ ಕೆಲ ಯುವಕರು ಹೆಸರು ನೋಂದಾಯಿಸಿದ್ದಾರೆ. ಅವರಿಗೆ ತರಬೇತಿಯನ್ನು ಕೂಡ ನೀಡುತ್ತಿದ್ದೇವೆ. ಆಸಕ್ತ ಯುವಕರು ದಯವಿಟ್ಟು ಮುಂದೆ ಬನ್ನಿ ಎಂದು ರಘುಪತಿ ಭಟ್ ವಿನಂತಿಸಿದ್ದಾರೆ.