ಉಡುಪಿ: ಎರಡು ದಿನಗಳಿಂದ ಜಿಲ್ಲೆಯಲ್ಲಿದ್ದ ಮಳೆರಾಯನ ಅಬ್ಬರ ಈಗ ಸಂಪೂರ್ಣ ಕ್ಷೀಣಿಸಿದೆ. ನಿನ್ನೆ ರಾತ್ರಿಯಿಂದಲೇ ಮಳೆ ಆರ್ಭಟ ಕಡಿಮೆಯಾಗಿದೆ.
ಶನಿವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಉಡುಪಿಯ ನಿಟ್ಟೂರು, ಕೊಡಂಕೂರು, ಮಠದ ಬೆಟ್ಟು, ಗುಂಡಿಬೈಲು, ಬನ್ನಂಜೆ, ಬೈಲಕೆರೆ ಸೇರಿದಂತೆ ವಿವಿಧೆಡೆ 700ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದವು. ಸುಮಾರು 2500 ಜನರನ್ನು ರಕ್ಷಣೆ ಮಾಡಲಾಗಿತ್ತು. ಎನ್ಡಿಆರ್ಎಫ್ ತಂಡಗಳು ಕಾರ್ಯಾಚರಣೆಗಿಳಿದಿದ್ದವು.
ಆದರೆ ನಿನ್ನೆ ರಾತ್ರಿಯಿಂದ ಮಳೆ ಸಂಪೂರ್ಣ ಇಳಿಮುಖವಾಗಿದ್ದು, ಜನರು ತಮ್ಮ ಮನೆಗಳಿಗೆ ಮತ್ತೆ ಹಿಂತಿರುಗುತ್ತಿರುವ ದ್ರಶ್ಯ ಕಂಡುಬರುತ್ತಿದೆ. ಪರಿಹಾರ ಕೇಂದ್ರದಲ್ಲಿದ್ದ ಜನರು ತಮ್ಮ ತಮ್ಮ ವಸ್ತುಗಳೊಂದಿಗೆ ಮನೆಗಳತ್ತ ತೆರಳುತ್ತಿದ್ದಾರೆ.
ಜಿಲ್ಲೆಯಲ್ಲಿ ಇಂದು ಹಾಗೂ ನಾಳೆ ರೆಡ್ ಅಲರ್ಟ್ ಘೋಷಣೆಯಾಗಿದೆ. ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.