ಉಡುಪಿ: 18 ತಿಂಗಳುಗಳ ಹಿಂದೆ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಕಾನೂನು ಪ್ರಕ್ರಿಯೆ ಮೂಲಕ ದಫನ ಮಾಡಲಾಗಿದ್ದ, ಅಪರಿಚಿತ ವ್ಯಕ್ತಿಯ ಕಳೇಬರವನ್ನು ಪಂಜಾಬ್ ಪೊಲೀಸರು ಹೊರ ತೆಗೆಸಿರುವ ಘಟನೆ ಶನಿವಾರ ನಡೆದಿದೆ. ವ್ಯಕ್ತಿಯ ಶವ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಡು ಬಂದಿತ್ತು. ಶವವನ್ನು ವಾರಸುದಾರರ ಬರುವಿಕೆಗಾಗಿ ಪೊಲೀಸರು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಟ್ಟಿದ್ದರು. ಕಾಲಮಿತಿ ಕಳೆದರೂ ಯಾರೂ ಸಂಪರ್ಕಿಸದೇ ಇರುವುದರಿಂದ ಕಾನೂನಿನಂತೆ ದಫನ ಕಾರ್ಯ ನಡೆಸಿದ್ದರು.
ಬಹಳ ಸಮಯಗಳ ಬಳಿಕ ಪಂಜಾಬ್ ಮೂಲದ ವ್ಯಕ್ತಿಯೆಂದು ತಿಳಿದು ಬಂದಿದೆ. ಪಂಜಾಬ್ನಿಂದ ಉಡುಪಿಗೆ ಆಗಮಿಸಿದ ಪೊಲೀಸರು, ಕಾರ್ಯವ್ಯಾಪ್ತಿಗೆ ಒಳಪಡುವ ಠಾಣೆಗಳ ಪೊಲೀಸರ ಸಹಕಾರದಿಂದ ದಫನ ಸ್ಥಳ ಗುರುತಿಸಿ, ಅಸ್ಥಿಪಂಜರವನ್ನು ತಹಶೀಲ್ದಾರ್ ಹಾಗೂ ಮತ್ತಿರರ ಅಧಿಕಾರಿಗಳ ಸಮಕ್ಷಮದಲ್ಲಿ ಮೇಲಕ್ಕೆತ್ತಿದರು. ನಂತರ ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಪೊಲೀಸ್ ಇಲಾಖೆಗೆ ಸಹಕರಿಸಿದರು.
ಇದನ್ನೂ ಓದಿ: ಅಮೆರಿಕದಲ್ಲಿ 'ಜನಾಂಗೀಯ ಪ್ರೇರಿತ' ಸಾಮೂಹಿಕ ಗುಂಡಿನ ದಾಳಿ: 10 ಮಂದಿ ಸಾವು