ಉಡುಪಿ: ಇಲ್ಲಿನ ಕರಾವಳಿ ಬೈಪಾಸ್ ಹತ್ತಿರದ ಹೆದ್ದಾರಿ ಬಳಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದ ನಾಲ್ಕು ಕುಟುಂಬದ 12 ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿವೆ.

ಮರದ ಕೆಲವು ಸಾಮಗ್ರಿಗಳನ್ನು ಮಾರಿಕೊಂಡು, ಹೆದ್ದಾರಿ ಬದಿ ಬದುಕು ನಡೆಸುತ್ತಿದ್ದ ಕುಟುಂಬಗಳಿವು. ಭಾರಿ ವಾಹನಗಳ ಸಂಚಾರದ ತುದಿಯಲ್ಲಿ ಮಕ್ಕಳು ಆಟವಾಡಿಕೊಂಡಿದ್ದು, ಅಪಾಯದ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತರು ಕುಟುಂಬಗಳನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದ್ದರು. ಗುರುವಾರ ಇಲಾಖೆಗಳ ಸಹಕಾರದಿಂದ ನಾಲ್ಕು ಕುಟುಂಬದ ಮಕ್ಕಳನ್ನು ರಕ್ಷಿಸಲಾಗಿದೆ.
12 ಮಕ್ಕಳಲ್ಲಿ ಇಬ್ಬರು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದಯಾನಂದ, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್, ಸಾಮಾಜಿಕ ಕಾರ್ಯಕರ್ತ ಯೋಗೀಶ್ ಹಾಗೂ ಗ್ಲೀಶಾ ಮೊಂತೇರೋ ಇದ್ದರು.