ಉಡುಪಿ: ನಗರೋತ್ಥಾನ ಯೋಜನೆಯಡಿ ಸುಮಾರು 1 ಕೋಟಿ 47 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಬೇಕಾದ ಸೇತುವೆ ಅರ್ಧಂಬರ್ಧ ನಿರ್ಮಾಣವಾಗಿ ನನೆಗುದಿಗೆ ಬಿದ್ದಿದೆ.
ಜಿಲ್ಲೆಯ ಪಾಂಗಾಳದಿಂದ ಕೈಪುಂಜಾಲಿಗೆ ಹೋಗಬೇಕಾದ್ರೆ ಇಲ್ಲಿನ ಗ್ರಾಮಸ್ಥರು 5 ಕಿ.ಮೀ. ಸುತ್ತಿ ಬರಬೇಕಿತ್ತು. ಹೇಗೋ ಜನರ ಹೋರಾಟದಿಂದ ಕೊನೆಗೂ ಸೇತುವೆ ನಿರ್ಮಾಣ ಕಾಮಗಾರಿ 2018ರಲ್ಲಿ ಆರಂಭಗೊಂಡಿತ್ತು. ಸೇತುವೆ ನಿರ್ಮಾಣ ಶುರು ಆಯ್ತು ಅಂತಾ ಖುಷಿಪಟ್ರೆ ಎರಡು ವರ್ಷದಿಂದ ಸೇತುವೆ ಕಾಮಗಾರಿ ಮಾತ್ರ ಪೂರ್ಣವಾಗಲೇ ಇಲ್ಲ. ಇತ್ತ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಭತ್ತದ ಬೆಳೆಗೆ ಬಹಳಷ್ಟು ಹಾನಿ ಉಂಟು ಮಾಡಿತ್ತು.
ಸೇತುವೆ ಕಂಪ್ಲೀಟ್ ಆಗದೆ ಇದ್ರು ಜನರ ಓಡಾಟಕ್ಕೂ ಇಲ್ಲಿ ಸರಿಯಾದ ದಾರಿಯನ್ನು ಮಾಡಿಕೊಟ್ಟಿಲ್ಲ. ಸೇತುವೆ ಪಿಲ್ಲರ್ ನಿರ್ಮಾಣವಾಗಿದ್ದು, ಪಿಲ್ಲರ್ ಎಡಭಾಗದಲ್ಲಿ ಕಬ್ಬಿಣದ ಸರಳಿನ ಮೇಲೆ ತಗಡು ಜೋಡಿಸಿದ್ದಾರೆ. ಜನ ಓಡಾಡಲು ಇದೇ ಕಬ್ಬಿಣದ ತಗಡನ್ನು ಅವಲಂಬಿಸಿದ್ದು, ಸ್ವಲ್ಪ ಯಾಮಾರಿದ್ರು ಜೀವ ಹೋಗೋದು ಗ್ಯಾರಂಟಿ. ಆದ್ರೂ ಗುತ್ತಿಗೆದಾರರು ಜನರ ಜೀವದ ಜೊತೆ ಚೆಲ್ಲಾಟ ಆಡ್ತಾ ಇದ್ದಾರೆ. ಈ ಬಗ್ಗೆ ಜನತೆ ಜಿಲ್ಲಾಡಳಿತಕ್ಕೂ ಸಾಕಷ್ಟು ಬಾರಿ ಮನವಿ ನೀಡಿದ್ರು ಜಿಲ್ಲಾಡಳಿತ ಇನ್ನೂ ಎಚ್ಚರಗೊಂಡಿಲ್ಲ.
ಬರೀ 50 ಮೀಟರ್ ಸೇತುವೆ ನಿರ್ಮಾಣ 2 ವರ್ಷ ಕಳೆದ್ರೂ ಇನ್ನೂ ಕಂಪ್ಲೀಟ್ ಆಗಿಲ್ಲ. ಶಾಲೆಗೆ ಹೋಗೋ ಮಕ್ಕಳಿಂದ ಹಿಡಿದು ಕೃಷಿಕರು ಮತ್ತು ಮೀನುಗಾರರು ಎಲ್ಲರೂ ಈ ಸೇತುವೆ ದಾಟಲು ಹರಸಾಹಸ ಪಡಬೇಕಾಗಿದೆ. ಈ ಡಿಸೆಂಬರ್ ಒಳಗೆ ಕಾಮಗಾರಿ ಆರಂಭಿಸದಿದ್ದಲ್ಲಿ ತೀವ್ರ ಹೋರಾಟಕ್ಕೆ ಜನತೆ ಸಿದ್ಧತೆ ನಡೆಸುತ್ತಿದ್ದಾರೆ. ಜೊತೆಗೆ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ.