ನವದೆಹಲಿ/ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಭೇಟಿ ಮಾಡಿದರು.
ಕೊರೊನಾದಿಂದಾಗಿ ದೇಶದ ಗೋಶಾಲೆಗಳು ಆರ್ಥಿಕ ವಿಪತ್ತನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರದಿಂದ ಕನಿಷ್ಠ 200 ಕೋಟಿ ಪರಿಹಾರ ನಿಧಿಯನ್ನು ಒದಗಿಸುವಂತೆ ಕೋರಿ ಕಳೆದ ಆಗಸ್ಟ್ ತಿಂಗಳಲ್ಲಿ ಶ್ರೀಗಳು ಸಚಿವರಿಗೆ ಪತ್ರಮುಖೇನ ಮನವಿ ಕಳಿಸಿದದ್ದರು. ಪತ್ರಕ್ಕೆ ಉತ್ತರ ನೀಡಿದ ವಿತ್ತೆ ಸಚಿವೆ, ಈಗಾಗಲೇ ಕೇಂದ್ರವು ಈ ಬಗ್ಗೆ ವಿಶೇಷ ಗಮನಹರಿಸಿ ಹಣಕಾಸು ಇಲಾಖೆಯಿಂದ ಗೋಶಾಲೆಗಳಿಗೆ ಸಂಬಂಧಿಸಿದ ಸಚಿವಾಲಯಕ್ಕೆ 900 ಕೋಟಿ ರೂ ಹಸ್ತಾಂತರಿಸಿದೆ. ಅಲ್ಲಿಂದ ಎಲ್ಲಾ ರಾಜ್ಯ ಸರ್ಕಾರಗಳ ಮೂಲಕ ನೋಂದಾಯಿತ ಗೋಶಾಲೆಗಳಿಗೆ ಆದ್ಯತೆಯ ನೆಲೆಯಲ್ಲಿ ಈ ನಿಧಿಯ ವಿತರಣೆಯಾಗಲಿದೆ ಎಂದು ಭರವಸೆ ನೀಡಿದರು.
ಉಡುಪಿಯ ನೇಕಾರ ಸಮಾಜದವರು ದೀಪಾವಳಿಯ ಉಡುಗೊರೆಯಾಗಿ ನೀಡಿದ ಎರಡು ಕೈಮಗ್ಗದ ಸೀರೆಗಳನ್ನು ಹಾಗೂ ಬೆಳ್ಳಿ ಬಟ್ಟಲಲ್ಲಿ ಕುಂಕುಮ, ಉಡುಪಿ ಕೃಷ್ಣನ ಪ್ರಸಾದ ಫಲ ಮಂತ್ರಾಕ್ಷತೆ ನೀಡಿ ಸ್ವಾಮೀಜಿ ಆಶೀರ್ವದಿಸಿದರು. ಈ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ನೆಲದಲ್ಲೇ ಆಸೀನರಾಗಿ ಮಾತುಕತೆ ನಡೆಸಿದ್ದು, ಸಂತರ ಕುರಿತಾದ ಅವರ ಶ್ರದ್ಧಾ ಭಕ್ತಿಗೆ ಕನ್ನಡಿಯಾಗಿತ್ತು.