ಉಡುಪಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಸಹಜ. ಯಾಕಂದ್ರೆ ಉಪ ಚುನಾವಣೆ ಇನ್ನಷ್ಟೇ ಆಗಬೇಕು. ನಮ್ಮಲ್ಲಿ ಕೇವಲ 106 ಮಂದಿ ಶಾಸಕರಿದ್ದಾರೆ. ಬಹುಮತ ಸಾಧಿಸಲು 113 ಆಗಲೇಬೇಕು. ಬಹುಮತ ಸಿಗುವ ತನಕ ನಮ್ಮದು ತಂತಿ ಮೇಲಿನ ನಡಿಗೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಶಾಸಕರನ್ನು ಗೆಲ್ಲಿಸುವ ಪ್ರಯತ್ನ ಮಾಡಬೇಕಿದೆ. ಸರ್ಕಾರ ಸ್ಥಿರ ಆದ ಮೇಲೆ ಯಾವುದೇ ಸಮಸ್ಯೆ ಇರಲ್ಲ. ಸರ್ಕಾರದಲ್ಲಿ ಮಂತ್ರಿಗಳಾಗಿರುವವರ ಸಂಖ್ಯೆ ಕಡಿಮೆ ಇದೆ. ಹಿರಿಯ ಶಾಸಕರಿಗೆಲ್ಲಾ ಮಂತ್ರಿ ಆಗುವ ಅಪೇಕ್ಷೆಯಿದೆ. ಅವರ ಅಪೇಕ್ಷೆ ತಪ್ಪಲ್ಲ. ಯಾಕಂದ್ರೆ ಅನೇಕ ಬಾರಿ ಗೆದ್ದಿದ್ದಾರೆ. ಅವರಿಗೆ ತೃಪ್ತಿ ಪಡಿಸುವುದು ಸಹಜವಾಗಿ ಕಷ್ಟದ ಕೆಲಸ ಎಂದರು.
ಉಪ ಚುನಾವಣೆ ಬಳಿಕ ಸರ್ಕಾರ ಪತನ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಪತನದ ಬಗ್ಗೆ ಸಿದ್ದರಾಮಯ್ಯ ಕಾಣುತ್ತಿರುವುದು ಕನಸು. ನರಿಗೆ ದ್ರಾಕ್ಷಿ ಹುಳಿಯಾಗಿಯೇ ಇರುತ್ತೆ. ಆದರೆ ಅದರ ಬಾಯಿಗೆ ಸಿಗಲ್ಲ ಅಂತಾ ಲೇವಡಿ ಮಾಡಿದ್ರು.
ಬಿಎಸ್ವೈ-ನಳಿನ್ ಕುಮಾರ್ ಕಟೀಲ್ ಸಮನ್ವಯ ಕೊರತೆ ವಿಚಾರದ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಯಡಿಯೂರಪ್ಪ 40 ವರ್ಷ ರಾಜಕಾರಣ ಮಾಡಿದ್ದಾರೆ. ಕಟೀಲ್ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು. ಬಾರತೀಯ ಜನತಾ ಪಾರ್ಟಿ ಹಾಗೂ ಸರ್ಕಾರ ಒಟ್ಟಿಗೆ ಸೇರಿ ರಾಜ್ಯದ ಅಭಿವೃದ್ಧಿ ಮಾಡುತ್ತೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಭಿನ್ನಮತ ಇಲ್ಲ ಅಂತಾ ಸ್ಪಷ್ಟಪಡಿಸಿದರು.