ಉಡುಪಿ: ಜನವರಿ 11ರಂದು ಪುರಭವನದಲ್ಲಿ ಆಯೋಜಿಸಿದ್ದ ಬಿಲ್ಲವ ಮುಸ್ಲಿಂ ಸ್ನೇಹ ಸಮ್ಮೇಳನಕ್ಕೆ, ಬಿಲ್ಲವ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಮಾವೇಶವನ್ನು ವಿರೋಧಿಸಿ ಬಿಲ್ಲವ ಸಂಘಟನೆಗಳು ಹೋರಾಟಕ್ಕೆ ಸಜ್ಜಾಗಿವೆ.ಇದೇ ಮೊದಲ ಬಾರಿಗೆ ಬಿಲ್ಲವ ಮತ್ತು ಮುಸ್ಲಿಂ ಸ್ನೇಹ ಸಮ್ಮೇಳನ ನಡೆಯುತ್ತಿದ್ದು, ಅದಕ್ಕಾಗಿ ಎರಡೂ ಕಡೆಯಿಂದ ಅತಿಥಿಗಳನ್ನು ಆಹ್ವಾನಿಸಲಾಗಿತ್ತು.
ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಸಾಕಷ್ಟು ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಆಗಮಿಸುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ವಿನಯ್ ಕುಮಾರ್ ಸೊರಕೆ ಹಾಗೂ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ವಿರುದ್ಧ ನೆಟ್ಟಿಗರು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂತಹ ಸಮಾವೇಶ ಮಾಡುವ ಮೂಲಕ ಜಾತಿಯ ನಡುವೆ ವಿಷ ಬೀಜ ಬಿತ್ತುವ ಹುನ್ನಾರ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಮಧ್ಯೆ ಉದ್ಘಾಟಕರಾಗಿ ಆಗಮಿಸಬೇಕಿದ್ದ ಕೋಟಾ ಶ್ರೀನಿವಾಸ್ ಪೂಜಾರಿ ತನಗೂ ಈ ಸಮಾವೇಶಕ್ಕೂ ಯಾವುದೇ ಸಂಬಂಧವಿಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ.
ಸಮಾನ ಮನಸ್ಕ ಬಿಲ್ಲವ ಸಂಘಟನೆಗಳು ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಈ ಕಾರ್ಯಕ್ರಮವನ್ನು ಏರ್ಪಡಿಸಿದೆ. ಆದರೆ ಅದರ ನೇತೃತ್ವ ವಹಿಸಿದವರು ಯಾರು ಅನ್ನುವುದರ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಈ ಕಾರಣದಿಂದ ಒಂದು ಜಾತಿಯ ಏಳಿಗೆಗಾಗಿ ನಡೆಯಬೇಕಿದ್ದ ಸಮಾವೇಶ, ರಾಜಕೀಯ ಪ್ರವೇಶಿಸಿ ವಿನಾ ಕಾರಣ ವಿವಾದ ಸೃಷ್ಟಿಸಿದೆ.
ಯಾವುದೇ ಸಂಘಟನೆಗಳ ಜೊತೆ ಚರ್ಚೆ ನಡೆಸದೆ ಕೇವಲ ಕೆಲವರ ಕೀಳು ಅಭಿರುಚಿ ಮತ್ತು ಜಾತಿಯ ಮಧ್ಯೆ ಒಡಕು ತರುವ ಸಮ್ಮೇಳನ ಎಂದು ಬಿಲ್ಲವ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಈ ಕಾರ್ಯಕ್ರಮದಲ್ಲಿ ಬಿಲ್ಲವ ಎನ್ನುವ ಪದ ತೆಗೆದು ಹಾಕದಿದ್ದರೆ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಬಿಲ್ಲವ ಮುಖಂಡರು ಹೇಳಿದ್ದಾರೆ. ಜನವರಿ 9 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ.