ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಇವತ್ತು ಕಟ್ಟಿಗೆ ಮುಹೂರ್ತವು ಶ್ರೀಕೃಷ್ಣ ಮಠದ ಮಧ್ವಸರೋವರದ ಬಳಿ ನೆರವೇರಿತು. ಮಠಾಧೀಶರು ಮತ್ತು ಭಕ್ತರು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾದರು.
ಅದಮಾರು ಮಠದ ಆಸ್ಥಾನ ಪುರೋಹಿತ ಶಿಬರೂರು ವಾಸುದೇವ ಅವರ ನೇತೃತ್ವದಲ್ಲಿ ಕಟ್ಟಿಗೆ ಮೂಹೂರ್ತದ ವಿಧಿವಿಧಾನ ನಡೆಯಿತು. ಮಠಾಧೀಶರು ಮತ್ತು ಭಕ್ತಾದಿಗಳು ಈ ಧಾರ್ಮಿಕ ವಿಧಿಗೆ ಸಾಕ್ಷಿಯಾದರು.
ಉಡುಪಿ ಪರ್ಯಾಯಕ್ಕೆ ಐದೇ ತಿಂಗಳು ಬಾಕಿಯಿದೆ. ಪಲಿಮಾರು ಮಠದ ಪರ್ಯಾಯದ ಬಳಿಕ ಅದಮಾರು ಸ್ವಾಮೀಜಿಗೆ ಪೂಜಾ ಕೈಂಕರ್ಯದ ಅಧಿಕಾರ ಸಿಗಲಿದೆ. ಪರ್ಯಾಯ ಮಹೋತ್ಸವಕ್ಕೂ ಮುನ್ನ ಭಕ್ತರಿಗೆ ನಿತ್ಯ ಅನ್ನಸಂತರ್ಪಣೆಯ ಸಂಕಲ್ಪದಿಂದ ಭಾವಿ ಪರ್ಯಾಯ ಮಠಾಧೀಶರು ಮುಹೂರ್ತ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಿದ್ದಾರೆ. ಉಡುಪಿಯ ಶ್ರೀಕೃಷ್ಣ ದೇವರಿಗೆ ನೈವೇದ್ಯ ಹಾಗೂ ಮಠಕ್ಕೆ ಆಗಮಿಸುವ ಭಕ್ತರಿಗೆ ತಯಾರಿಸುವ ಅಡುಗೆ ಮಾಡಲು ಬೇಕಾದ ಕಟ್ಟಿಗೆಯನ್ನು ರಥದ ಮಾದರಿಯಲ್ಲಿ ಸಂಗ್ರಹಿಸಿಡುವ ಪ್ರಾರಂಭೋತ್ಸವವು ಕಟ್ಟಿಗೆ ಮುಹೂರ್ತ ಎನ್ನುವ ಆಚರಣೆಯಲ್ಲಿದೆ.
ಬೆಳಗ್ಗೆ 8 ಗಂಟೆಗೆ ಸಿಂಹ ಲಗ್ನ ಸುಮೂಹೂರ್ತದಲ್ಲಿ ಅದಮಾರು ಮಠದ ಪಟ್ಟದ ದೇವರಲ್ಲಿ ಪೂಜೆ ಸಲ್ಲಿಸಿ ನಂತರ ಚಂದ್ರಮೌಳೇಶ್ವರ, ಅನಂತೇಶ್ವರ, ಶ್ರೀಕೃಷ್ಣ, ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥನೆ ಕಾರ್ಯಕ್ರಮ ಆರಂಭಗೊಂಡಿತು. ಅದಮಾರು ಮಠದಿಂದ ತಲೆಯ ಮೇಲೆ ಕಟ್ಟಿಗೆಯನ್ನು ಹೊತ್ತುಕೊಂಡು ರಾಜಾಂಗಣ, ಗೀತಾ ಮಂದಿರವಾಗಿ ಮೆರವಣಿಗೆಯಲ್ಲಿ ಸಾಗಿತು.