ಉಡುಪಿ: ಕೋವಿಡ್ ಕಾರಣಕ್ಕೆ ಮಠದಲ್ಲಿ ಈ ಬಾರಿ ಮುದ್ರಾಧಾರಣೆ ನಡೆದಿರಲಿಲ್ಲ. ಮುದ್ರಾಧಾರಣೆ ನಡೆಯದೇ, ಭಕ್ತರಿಗೆ ನೆಮ್ಮದಿಯಿಲ್ಲ. ಹಾಗಾಗಿ ಕೊನೆಗೂ ಪರ್ಯಾಯ ಅದಮಾರು ಮಠದವರು ಇಂದು ತಪ್ತ ಮುದ್ರಾಧಾರಣೆ ಏರ್ಪಡಿಸಿದರು. ಭಕ್ತರು ಸಾವಿರ ಸಂಖ್ಯೆಯಲ್ಲಿ ಬಂದು ತಪ್ತ ಮುದ್ರೆ ಹಾಕಿಸಿಕೊಂಡು ತೃಪ್ತರಾದರು.
ಮಾಧ್ವ ಪರಂಪರೆಯಲ್ಲಿ ತಪ್ತಮುದ್ರಾಧಾರಣೆ ಎಂಬ ವಿಶೇಷ ಆಚರಣೆಯೊಂದು ನಡೆಯುತ್ತೆ. ಅದು ಪ್ರಥಮ ಏಕಾದಶಿಯಂದು ಅಂದರೆ ಮಳೆಗಾಲದಲ್ಲಿ ನಡೆಯುವುದು ಸಂಪ್ರದಾಯ. ಆದರೆ, ಈ ಬಾರಿ ಕೊರೊನಾ ಕಾರಣಕ್ಕೆ ಕೃಷ್ಣಮಠ ಬಂದ್ ಆಗಿತ್ತು. ಅಷ್ಟಮಠಾಧೀಶರು ಮಾತ್ರ ಮುದ್ರೆ ಹಾಕಿಸಿಕೊಂಡು, ಆಚರಣೆಯನ್ನು ಕೊವಿಡ್ ನಿಮಿತ್ತ ಬಂದ್ ಮಾಡಿದ್ದರು. ವರ್ಷಕ್ಕೊಮ್ಮೆ ಮುದ್ರೆ ಹಾಕಿಸಿಕೊಂಡು ತಾವು ಕೃಷ್ಣನ ಭಕ್ತರು ಎಂದು ಅನುಸಂಧಾನ ಮಾಡಿಕೊಳ್ಳುವುದು ಇಲ್ಲಿನ ಸಂಪ್ರದಾಯ. ಹೀಗಾಗಿ ಮುದ್ರಾಧಾರಣೆ ನಡೆಯದೇ ಭಕ್ತರು ಕೊರಗುತ್ತಿದ್ದರು. ಇಂದು ಕೊನೆಗೂ ಪರ್ಯಾಯ ಅದಮಾರು ಮಠದವರು ಇಂದು ರಾಜಾಂಗಣದಲ್ಲಿ ಮುದ್ರಾಧಾರಣೆಗೆ ವ್ಯವಸ್ಥೆ ಮಾಡಿದ್ದರು. ಸಾವಿರಾರು ಭಕ್ತರು ಕೋವಿಡ್ ನಿಯಮಾವಳಿ ಪ್ರಕಾರ ಬಂದು ಮುದ್ರೆ ಹಾಕಿಸಿಕೊಂಡರು. ಹೀಗಾಗಿ ಕೃಷ್ಣಭಕ್ತರಿಗಿದ್ದ ಕೊರಗು ಕೊನೆಗೂ ದೂರವಾಗಿದೆ.
ಮಠಾಧೀಶರಿಗೆ ಮಾತ್ರ ಮುದ್ರೆ ಇರಿಸುವ ಅಧಿಕಾರವಿದೆ. ಹಾಗಾಗಿ ಅಷ್ಟಮಠಾಧೀಶರಿಂದ ಮುದ್ರಾಧಾರಣೆ ಮಾಡಿಸಿಕೊಳ್ಳಲು ಭಕ್ತರು ಸರದಿಯಲ್ಲಿ ಕಾಯುತ್ತಾರೆ. ವಿಷ್ಣು ದೇವರ ಆಯುಧಗಳಾದ ಶಂಖ ಮತ್ತು ಚಕ್ರದ ಮುದ್ರೆಯನ್ನು ಸುದರ್ಶನ ಹೋಮದ ಶಾಖದಲ್ಲಿ ಕಾಯಿಸಿ, ಮೈಮೇಲೆ ಅಚ್ಚು ಹಾಕೋದು ಇಲ್ಲಿನ ಪದ್ಧತಿ. ವೈಷ್ಣವರು ತಮ್ಮ ಮತ್ತು ದೇವರ ನಡುವಿನ ಸಂಬಂಧವನ್ನು ಈ ಮೂಲಕ ಪ್ರಕಟಿಸುತ್ತಾರೆ. ಈ ಆಚರಣೆಗೆ ಇನ್ನೊಂದು ಒಳನೋಟವಿದೆ. ವಾತಾವರಣದ ದೋಷಗಳಿಂದ ಬರಬಹುದಾದ ಖಾಯಿಲೆಗಳನ್ನು ತಡೆಯುವ ಶಕ್ತಿಯನ್ನು ಈ ಲೋಹದ ಶಾಖ ನೀಡುತ್ತೆ ಅನ್ನೋದು ಈ ಆಚರಣೆಯ ಹಿಂದಿರುವ ವೈಜ್ಞಾನಿಕ ಕಾರಣ ಮಹತ್ವವಾಗಿದೆ.
ಚಾತುರ್ಮಾಸ್ಯ ವೃತದ ಆರಂಭದಲ್ಲಿ ನಡೆಯುವ ಮುದ್ರಾಧಾರಣೆ, ಇದೇ ಮೊದಲ ಬಾರಿಗೆ ಕಾರ್ತಿಕ ಏಕಾದಶಿಯಂದು ನಡೆದದ್ದು ವಿಶೇಷವಾಗಿತ್ತು.