ಉಡುಪಿ: ಉಡುಪಿ ಹೊಸತೊಂದು ಕೃಷಿಕ್ರಾಂತಿಗೆ ಸಿದ್ದವಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕೃಷಿಭೂಮಿ ಹಡಿಲು ಬೀಳಬಾರದು (ಸಾಗುವಳಿ ಮಾಡದೇ ಬಿಡುವ ಭೂಮಿ) ಎಂಬ ಕಾಳಜಿಯಿಂದ ಶಾಸಕ ರಘುಪತಿ ಭಟ್ ಮಾದರಿ ಕೆಲಸ ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಖಾಲಿಬಿಟ್ಟ ಕೃಷಿಭೂಮಿಯಲ್ಲಿ ಭತ್ತ ಬಿತ್ತನೆ ಮಾಡಲು ತಯಾರಿ ನಡೆಸಿದ್ದಾರೆ. ಈ ಮಳೆಗಾಲದಲ್ಲಿ ಸಾವಿರಾರು ಎಕರೆ ಕೃಷಿಭೂಮಿ ಮತ್ತೆ ಹಸಿರಾಗಿ ಕಂಗೊಳಿಸಲು ಸಿದ್ದವಾಗುತ್ತಿದೆ.
ಒಂದು ಕಾಲಕ್ಕೆ ಉಡುಪಿಯಲ್ಲಿ ಕೃಷಿಯೇ ಜೀವನಪದ್ದತಿಯಾಗಿತ್ತು. ಆದರೆ, ಕಾಲಕ್ರಮೇಣ ಭತ್ತ ಬೆಳೆಯುವುದು ಬಿಟ್ಟು ಇಲ್ಲಿನ ಜನ ಇತರ ವಾಣಿಜ್ಯ ಚುಟವಟಿಕೆಗಳಲ್ಲೇ ಆಸಕ್ತರಾದರು. ಪರಿಣಾಮ ಜಿಲ್ಲೆಯಲ್ಲಿ ಹೆಕ್ಟೇರುಗಟ್ಟಲೆ ಭೂಮಿ ಕೃಷಿ ಮಾಡದೆ ಖಾಲಿ ಬಿದ್ದಿದೆ, ಆದರೆ, ಈ ಬಾರಿ ಹಡಿಲು ಭೂಮಿಯಲ್ಲಿ ಭತ್ತ ಕೃಷಿ ನಡೆಸಲು ಸ್ವತಃ ಶಾಸಕರು ಮುಂದಾಗಿದ್ದಾರೆ.
ತಮ್ಮ ವಿಧಾನಸಭಾ ಕ್ಷೇತ್ರದ ನಗರಸಭಾ ವ್ಯಾಪ್ತಿಯ 35 ವಾರ್ಡ್ ಮತ್ತು ನಗರ ಸಭೆಗೆ ಹೊಂದಿಕೊಂಡಿರುವ 19 ಗ್ರಾಮ ಪಂಚಾಯಿತಿಗಳಲ್ಲಿ ಹಡಿಲು ಭೂಮಿ ಕೃಷಿ ಸಾಗುವಳಿ ಚಳವಳಿ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಎಲ್ಲ ಜನಪ್ರತಿನಿಧಿಗಳು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ್ದಾರೆ.
ಈ ಮಳೆಗಾಲದಲ್ಲಿ ಅಂದಾಜು 5 ಸಾವಿರ ಎಕರೆಗೂ ಅಧಿಕ ಹಡಿಲು ಕೃಷಿ ಭೂಮಿಯಲ್ಲಿ ಭತ್ತದ ಭಿತ್ತನೆ ನಡೆಯಲಿದೆ. ಇದಕ್ಕಾಗಿ ಭೂ ಮಾಲೀಕರ ಮನವೊಲಿಸಲಾಗುತ್ತಿದೆ. ಪ್ರತಿಯೊಬ್ಬ ಜನಪ್ರತಿನಿಧಿಗಳು ಹಡಿಲು ಕೃಷಿ ಭೂಮಿಗಳನ್ನು ಗುರುತಿಸಿ ಸ್ಥಳೀಯರನ್ನು, ಕೃಷಿಯಲ್ಲಿ ಆಸಕ್ತಿ ಇರುವವರನ್ನು, ಸಮಾಜ ಸೇವಕರನ್ನು ಹಾಗೂ ಸಂಘ - ಸಂಸ್ಥೆಯ ಅವರನ್ನು ಒಟ್ಟುಗೂಡಿಸಿ ಕೃಷಿ ನಡೆಸುವ ಸವಾಲು ಹೊಂದಿದ್ದಾರೆ. ಸಾವಯವ ಪದ್ಧತಿಯಲ್ಲಿ ಹಡಿಲು ಭೂಮಿ ಕೃಷಿ ಸಾಗುವಳಿ ನಡೆಸಲು ಯೋಜನೆ ತಯಾರಾಗಿದೆ.
ಉಡುಪಿಯ ಜನಪ್ರಿಯ ಶಿಕ್ಷಣ ಸಂಸ್ಥೆ ನಿಟ್ಟೂರು ಹೈಸ್ಕೂಲ್ ಈ ಯೋಜನೆಗೆ ಮಾಡೆಲ್ ಆಗಿದೆ. ಕಳೆದ ಮಳೆಗಾಲದಲ್ಲಿ ಕೊರೊನಾ ಸಂಬಂಧ ಲಾಕ್ಡೌನ್ ಇದ್ದಾಗ, ಈ ಹೈಸ್ಕೂಲ್ನ ಹಳೆ ವಿದ್ಯಾರ್ಥಿಗಳು ಸೇರಿ ಶಾಲಾ ಪರಿಸರದಲ್ಲಿ ಕೃಷಿ ನಡೆಸಿದ್ದರು. ಸುಮಾರು 50 ಎಕರೆ ಖಾಲಿ ಕೃಷಿ ಭೂಮಿಯಲ್ಲಿ ಅಂದಾಜು 30 ಟನ್ ಭತ್ತ ಬೆಳೆದಿದ್ದರು. ಬಳಿಕ ತಮ್ಮದೇ ಶಾಲೆಯ ಹೆಸರಿನ ಬ್ರಾಂಡ್ ಕ್ರಿಯೇಟ್ ಮಾಡಿ, ನಿಟ್ಟೂರು ಸ್ವರ್ಣಾ ಕಜೆ ಅಕ್ಕಿ ಅವರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.
ಒಂದು ವೇಳೆ ಈ ಹಡಿಲು ಭೂಮಿ ಸಾಗುವಳಿ ಯಶಸ್ವಿಯಾದರೆ, ರಾಜ್ಯಕ್ಕೆ ಮಾದರಿಯಾಲಿದೆ, ಕರಾವಳಿಯಲ್ಲಿ ಮತ್ತೆ ಕೃಷಿ ನಳನಳಿಸಲಿದೆ. ಪ್ರತ್ಯೇಕ ಬ್ರಾಂಡ್ನ ಗುಣಮಟ್ಟದ ಅಕ್ಕಿ ಗ್ರಾಹಕರಿಗೆ ಲಭ್ಯವಾಗಲಿದೆ.
ಇದನ್ನೂ ಓದಿ: ಪೇಟೆಂಟ್ ಪಡೆದ ಮಟ್ಟುಗುಳ್ಳ ತರಕಾರಿ ಬೆಳೆ ಪಿನಾಕಿನಿ ನದಿ ನೀರಿನಿಂದ ನಾಶ!