ಉಡುಪಿ: ಮುಖ್ಯಮಂತ್ರಿಗಳು ನನಗೆ ಪ್ರಮುಖ ಇಲಾಖೆ ನೀಡುವ ಮೂಲಕ ಬಹಳ ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದಾರೆ. ತಜ್ಞರ ಜೊತೆ ಮಾತುಕತೆ ನಡೆಸಿ ಇಲಾಖೆಯಲ್ಲಿ ಹೊಸತನ ಹಾಗೂ ಸುಧಾರಣೆಯನ್ನು ತರುವ ಕೆಲಸವನ್ನು ಮಾಡುತ್ತೇನೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾಷೆ, ನೆಲ, ಜಲದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕನ್ನಡ ಭಾಷೆಯ ಜೊತೆಗೆ ತುಳು ಸಂಸ್ಕೃತಿ ಬಗ್ಗೆ ಸಹ ವಿಶೇಷ ಕಾಳಜಿ ವಹಿಸುತ್ತೇನೆ. ತುಳು ಭಾಷೆಗೆ ಸೂಕ್ತ ಸ್ಥಾನಮಾನ ಕಲ್ಪಿಸಿ ಕೊಡುವ ಕೆಲಸ ಮಾಡುತ್ತೇನೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಉಡುಪಿಯಲ್ಲಿ 1,368 ಸಕ್ರಿಯ ಪ್ರಕರಣಗಳಿವೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಿದ್ದೇವೆ. ಕೊರೊನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಆಗಸ್ಟ್ 30ರ ಒಳಗೆ ಜಿಲ್ಲೆಯಲ್ಲಿ ಐಸಿಯುಗಳನ್ನು ಹೆಚ್ಚಿಸುತ್ತೇವೆ ಎಂದು ತಿಳಿಸಿದರು.
ಉಡುಪಿಯಲ್ಲಿ 34 ಸಾವಿರ ಡೋಸ್ ಕೋವಿಡ್ ವ್ಯಾಕ್ಸಿನ್ ಕೊರತೆ ಇದೆ. ಈ ಕುರಿತು ರಾಜ್ಯದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಲಸಿಕೆ ತರಿಸುವುದಾಗಿ ಸಚಿವರು ಭರವಸೆ ನೀಡಿದರು.