ಉಡುಪಿ: ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿದ ಬೆನ್ನಲ್ಲೇ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಇಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.
ಈ ವೇಳೆ ಗೋಹತ್ಯೆ ನಿಷೇಧ ಕಾನೂನು ಪರಿಣಾಮಕಾರಿ ಜಾರಿ ಮತ್ತು ಗೋರಕ್ಷಣೆಯ ಉಪಕ್ರಮಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು. ಸದರಿ ಕಾನೂನು ಜಾರಿಗಾಗಿ ಸುದೀರ್ಘ ಹೋರಾಟ ನಡೆಸಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ವಿಶೇಷವಾಗಿ ಸ್ಮರಿಸಿದ ಸಚಿವರು, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಮಾತುಕತೆಯ ವೇಳೆ ಗೋಮಾಳ ಭೂಮಿಗಳನ್ನು ಗೋಶಾಲೆಗೆ ಗುತ್ತಿಗೆ ನೀಡುವ, ದೇವಳಗಳ ಮತ್ತು ಸಹಕಾರ ಸಂಘ ಬ್ಯಾಂಕ್ಗಳ ಆದಾಯದ ಒಂದು ಭಾಗ ಗೋಶಾಲೆಗಳಿಗೆ ನೀಡುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಬಗ್ಗೆ ಶ್ರೀಗಳು ತಿಳಿಸಿದರು. ಇವುಗಳನ್ನು ಕೂಡಲೇ ಅನುಷ್ಠಾನಕ್ಕೆ ತರುವುತ್ತೇವೆ. ಪ್ರತೀ ತಾಲೂಕಿನಲ್ಲಿ ಎರಡು ಸರ್ಕಾರಿ ಗೋಶಾಲೆ ನಿರ್ಮಿಸಲಾಗುವುದು. ಖಾಸಗಿ ಗೋಶಾಲೆಗಳಿಗೆ ಪೂರ್ಣ ಸಹಕಾರ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಎಡೆಬಿಡದ ಕಾರ್ಯಕ್ರಮಗಳ ನಡುವೆಯೂ ಖುದ್ದು ಉಡುಪಿಯ ನೀಲಾವರ ಗೋಶಾಲೆಗೆ ಭೇಟಿ ನೀಡಿ ಪೇಜಾವರ ಶ್ರೀಗಳೊಂದಿಗೆ ಗೋಶಾಲೆಯನ್ನು ಪರಿಶೀಲಿಸಿ, ಮಾಹಿತಿ ಪಡೆದರು.