ಉಡುಪಿ: ಮದುವೆಯಾದ ನಂತರ ನವ ದಂಪತಿ ಮಧುಚಂದ್ರದ ಕುರಿತು ಹತ್ತಾರು ಕನಸನ್ನು ಹೊತ್ತಿರುತ್ತಾರೆ. ಎಲ್ಲಿ ಹೋಗಿ ಹನಿಮೂನ್ ಮಾಡಿಕೊಳ್ಳುವುದು ಎಂದು ಮೊದಲೇ ಯೋಚಿಸಿರ್ತಾರೆ. ಆದರೆ ಇಲ್ಲೊಂದು ನವ ಜೋಡಿ ಮದುವೆ ಮುಗಿಸಿ ಬಿಂದಾಸಾಗಿ ಹನಿಮೂನ್ಗೆ ಹೋಗೋದು ಬಿಟ್ಟು, ಪೊರಕೆ ಹಾಗೂ ಚೀಲ ಹಿಡಿದು ಸಮುದ್ರ ತೀರದಲ್ಲಿ ಕಸ ಹೆಕ್ಕುತ್ತಾ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ನವೆಂಬರ್ 18 ರಂದು ಹಸೆಮಣೆ ಏರಿರುವ ಉಡುಪಿಯ ಅನುದೀಪ್ ಹೆಗಡೆ ಮತ್ತು ಮಿನುಷಾ ಕಾಂಚನ, ಹನಿಮೂನನ್ನು ಮುಂದೂಡಿ 7 ದಿನ ಸೋಮೇಶ್ವರ ಬೀಚನ್ನು ಸ್ವಚ್ಛ ಮಾಡಿದ್ದಾರೆ. ಕಳೆದ 7 ದಿನಗಳಲ್ಲಿ 700 ಕೆ.ಜಿ. ಕಸ ಮತ್ತು 500 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ತಮ್ಮ ಹುಟ್ಟೂರಾದ ಬೈಂದೂರಿನ ಸೋಮೇಶ್ವರದ ಕಡಲ ತೀರದ ಭಾಗವನ್ನು ಸ್ವಚ್ಛಗೊಳಿಸಲು ಅನುದೀಪ್ ಪಣತೊಟ್ಟಿದ್ದು, ದಂಪತಿಯಿಂದ ಆರಂಭವಾದ ಕೆಲಸ ಈಗ ಹತ್ತಾರು ಜನರ ನೇತೃತ್ವದಲ್ಲಿ ಮುಂದುವರೆಯುತ್ತಿದೆ.
ಡಿಜಿಟಲ್ ಮಾರ್ಕೆಟಿಂಗ್ನಲ್ಲಿ ಕೆಲಸ ಮಾಡುತ್ತಿರುವ ಅನುದೀಪ್ ಹೆಗಡೆ, ಫಾರ್ಮಸಿಟಿಕಲ್ ಉದ್ಯೋಗಿಯಾಗಿರುವ ಮಿನುಷಾ ಕಾಂಚನ್ ಅವರನ್ನು ತಮ್ಮ ಬಾಳಸಂಗಾತಿಯಾಗಿ ಆಯ್ದುಕೊಂಡಿದ್ದಾರೆ. ವಿಶೇಷ ಅಂದ್ರೆ ಇವರಿಬ್ಬರೂ ಮದುವೆ ಮುಗಿಸಿ ಸಮಾಜಕ್ಕೆ ಮಾದರಿಯಾಗಬಹುದಾದ ಏನಾದರೂ ಕೆಲಸ ಮಾಡಲೇಬೇಕು ಎಂಬ ಪಣ ತೊಟ್ಟು ಈ ಸಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ.
![Couple Cleared Plastic from beach](https://etvbharatimages.akamaized.net/etvbharat/prod-images/9800267_thu.jpg)
ಇಬ್ಬರಿಂದ ಆರಂಭವಾದ ಈ ಸ್ವಚ್ಛತಾ ಕಾರ್ಯಕ್ಕೆ ಈಗ ಹತ್ತಾರು ಜನರು ಸೇರಿಕೊಂಡಿದ್ದಾರೆ. ಹತ್ತಾರು ಸಮಾಜಮುಖಿ ಸಂಘಟನೆಗಳು ಕೈಜೋಡಿಸಿವೆ. ಸೋಮೇಶ್ವರದಲ್ಲಿ ಹಸನ್ ಮತ್ತು ತಂಡ ಮಂಜುನಾಥ್ ಶೆಟ್ಟಿ ಮತ್ತು ಬಳಗ ಈ ದಂಪತಿ ಜೊತೆ ಬೀಚ್ ಸ್ವಚ್ಛತೆಗೆ ಸಾಥ್ ನೀಡಿವೆ. ಈ ಅಭಿಯಾನವನ್ನು ಮಲ್ಪೆ, ಮರವಂತೆ, ಕಾಪು ಮತ್ತು ತಣ್ಣೀರುಬಾವಿ ಬೀಚ್ಗಳಲ್ಲಿ ಮುಂದುವರೆಸುವ ಇಚ್ಛೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.
![Couple Cleared Plastic from beach](https://etvbharatimages.akamaized.net/etvbharat/prod-images/9800267_thumbn.jpg)
ತಮ್ಮ ಮದುವೆಯ ಮಧುರ ಕ್ಷಣಗಳನ್ನು ಜೀವನದಲ್ಲಿ ಅವಿಸ್ಮರಣೀಯ ಘಳಿಗೆಯಾಗಿಸುವುದರ ಜೊತೆಗೆ, ಈ ದಂಪತಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಎಲ್ಲರಿಗೂ ಮಾದರಿಯಾಗಿರುವ ಈ ನವ ದಂಪತಿಗೆ ಒಂದು ಸಲಾಂ ಹೇಳಲೇಬೇಕು.