ಉಡುಪಿ : ಖಾಸಗಿ ವಲಯದ ವಿಶ್ವವಿದ್ಯಾಲಯಗಳಲ್ಲಿ 2ನೇ ರ‍್ಯಾಂಕ್ ಪಡೆದಿರುವ ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ಮಹತ್ವದ ಘೋಷಣೆ ಮಾಡಿದೆ. ಕೋವಿಡ್‌ಗೆ ತುತ್ತಾಗಿ ಆಘಾತ ಅನುಭವಿಸಿರುವ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿ ಹೊತ್ತಿದೆ. ಮಾಹೆ ವಿವಿಯ ಈ ನಡೆ ದೇಶಕ್ಕೆ ಮಾದರಿ ಎನಿಸಿದೆ.
ಪ್ರಪಂಚದ 50ಕ್ಕೂ ಅಧಿಕ ರಾಷ್ಟ್ರಗಳ ವಿದ್ಯಾರ್ಥಿಗಳು ಕಲಿಯುತ್ತಿರುವ ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ಕೋವಿಡ್ ವಿರುದ್ಧದ ಸಮರದಲ್ಲಿ ಕೈಜೋಡಿಸಿದೆ. ಜಿಲ್ಲೆಯಲ್ಲಿ ಕೋವಿಡ್ ಮಿತಿ ಮೀರಿದಾಗ ತನ್ನ ಸ್ವಾಮ್ಯದ ಒಂದು ಸಂಪೂರ್ಣ ಆಸ್ಪತ್ರೆಯನ್ನು ಉಚಿತ ಚಿಕಿತ್ಸೆಗಾಗಿ ಬಿಟ್ಟುಕೊಟ್ಟು ಮಾದರಿಯಾಗಿತ್ತು. ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ.
ಖಾಸಗಿ ವಲಯದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮಾಹೆ ವಿಶ್ವವಿದ್ಯಾಲಯಕ್ಕೆ 2ನೇ ರ‍್ಯಾಂಕ್ ಇದೆ. ಸಹಜವಾಗಿಯೇ ಈ ವಿಶ್ವವಿದ್ಯಾಲಯದ ಕಲಿಕೆಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ದುಬಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಒಂದಿಷ್ಟು ಸುಧಾರಣೆ ಮಾಡಲು ಮುಂದಾಗಿರುವ ಮಾಹೆಯು, ಕೋವಿಡ್ ಸಂಕಷ್ಟದಲ್ಲಿ ತನ್ನ ವಿದ್ಯಾರ್ಥಿಗಳ ನೆರವಿಗೆ ಮುಂದಾಗಿದೆ.
ಕೊರೊನಾಗೆ ತುತ್ತಾಗಿ ಅನೇಕ ಸಾವು-ನೋವು ಸಂಭವಿಸಿದೆ. ತಮ್ಮ ವಿವಿಯಲ್ಲಿ ಕಲಿಯುತ್ತಿರುವ ಸಾಕಷ್ಟು ವಿದ್ಯಾರ್ಥಿಗಳ ಪೋಷಕರು ಕೊರೊನಾದಿಂದ ಮೃತಪಟ್ಟಿದ್ದಾರೆ. ಅಂತಃ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದಾಗಿ ಸಂಸ್ಥೆ ಘೋಷಿಸಿದೆ. ಮಣಿಪಾಲ, ಮಂಗಳೂರು, ಬೆಂಗಳೂರು ಮತ್ತು ಜಮ್ಶೇಡ್ಪುರದ ವಿದ್ಯಾರ್ಥಿಗಳನ್ನು ಪರಿಗಣಿಸಲಾಗುತ್ತಿದೆ. ಸುಮಾರು 40 ಮಂದಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಇದರಿಂದ ಅನುಕೂಲವಾಗಲಿದೆ.
ಮಾಹೆ ವಿಶ್ವವಿದ್ಯಾಲಯದ ಈ ನಡೆ ಖಾಸಗಿ ಶೈಕ್ಷಣಿಕ ವಲಯಕ್ಕೆ ಮಾದರಿ ಎನಿಸಿದೆ. ಈ ನಡುವೆ ಸೆಪ್ಟಂಬರ್ 2ನೇ ವಾರದಲ್ಲಿ ವಿಶ್ವವಿದ್ಯಾಲಯದ ತರಗತಿಗಳು ಆರಂಭವಾಗಲಿವೆ. ಸುಮಾರು 20 ಸಾವಿರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾರೆ. ಅವರಿಗೆ ಉಚಿತ ವ್ಯಾಕ್ಸಿನೇಷನ್ಗೂ ವ್ಯವಸ್ಥೆ ಮಾಡಲಾಗಿದೆ.
ಓದಿ: ಕುತೂಹಲ ಮೂಡಿಸಿದ ಸಿಎಂ ದೆಹಲಿ ಪ್ರವಾಸ.. 2 ದಿನದಲ್ಲಿ ಅವರ ಕಾರ್ಯ ಹೀಗಿರಲಿದೆ..