ಉಡುಪಿ: ಯುನಿವರ್ಸಿಟಾಸ್ ಇಂಡೋನೇಷ್ಯಾ (ಯುಐ) ತಯಾರಿಸಿದ ಹಸಿರು ಪರಿಸರ ಮತ್ತು ನೈರ್ಮಲ್ಯ ವಿಶ್ವವಿದ್ಯಾಯಗಳ ಪಟ್ಟಿಯಲ್ಲಿ ಉಡುಪಿಯ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಅಲ್ಲದೇ ವಿಶ್ವದ 121ನೇ ಅತ್ಯಂತ ಸ್ವಚ್ಛ ವಿವಿ ಎಂದು ಮಣಿಪಾಲ್ ಗುರುತಿಸಿಕೊಂಡಿದೆ.
ಕಳೆದ ವಾರ ಬಿಡುಗಡೆಯಾದ ಪಟ್ಟಿಯಲ್ಲಿ ಮಾಹೆ ದೇಶದ ಪ್ರಥಮ ವಿವಿಯಾಗಿ ಹೊರಹೊಮ್ಮಿದೆ. ಅಲ್ಲದೇ, ವಿಶ್ವದ 85 ದೇಶಗಳ 1050 ವಿಶ್ವವಿದ್ಯಾಲಯಗಳ ಶ್ರೇಯಾಂಕದಲ್ಲಿ ಮಾಹೆ ವಿವಿ ಮೂಲಸೌಕರ್ಯ, ಶಿಕ್ಷಣ ಮತ್ತು ಸಂಶೋಧನೆ, ಇಂಧನ ಮತ್ತು ಹವಾಮಾನ ಬದಲಾವಣೆ, ತ್ಯಾಜ್ಯ, ನೀರು ಮತ್ತು ಸಾರಿಗೆಯ ಆರು ಮಾನದಂಡಗಳಲ್ಲಿ 8050 ಅಂಕ ಪಡೆದಿದೆ.
2010 ರಿಂದ ಯೂನಿವರ್ಸಿಟಾಸ್ ಇಂಡೋನೇಷ್ಯಾ ಹಸಿರು ಕ್ಯಾಂಪಸ್ ಮತ್ತು ಪರಿಸರ ಸಮರ್ಥನೀಯತೆಯನ್ನು ಗುರುತಿಸಿ ವಿಶ್ವದ ಎಲ್ಲ ವಿವಿಗಳಿಗೆ ಶ್ರೇಯಾಂಕ ನೀಡುತ್ತಿದೆ. ಇದು ಪರಿಸರ ಸ್ನೇಹಿ ಮತ್ತು ಸುಸ್ಥಿರ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರತಿ ವಿವಿಯ ಬದ್ಧತೆಯನ್ನು ತೋರಿಸುತ್ತದೆ.
ಇನ್ನು ಈ ಬಗ್ಗೆ ಮಾತನಾಡಿದ ಮಾಹೆ ವಿವಿ ಕುಲಪತಿ ಎಂಡಿ ವೆಂಕಟೇಶ್, ಮಾಹೆ ಕ್ಯಾಂಪಸ್ ಯಾವಾಗಲೂ ನೈರ್ಮಲ್ಯ ಮತ್ತು ಹಸಿರಿನಿಂದ ಕೂಡಿರುತ್ತದೆ. ಇದು ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಗೆ ಪ್ರೇರಕವಾಗಿದೆ. ದೇಶದ ಮೊದಲ ವಿವಿ ಎಂಬ ಮನ್ನಣೆ ಸಂತಸ ತಂದಿದೆ. ಇದನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಓದಿ: ಹುಬ್ಬಳ್ಳಿಯಲ್ಲಿ ರಸ್ತೆ ಅಗಲೀಕರಣ ಹಿನ್ನೆಲೆ ಕಾರ್ಯಾಚರಣೆ.. ದರ್ಗಾ ಬಳಿ ಪೊಲೀಸ್ ಬಂದೋಬಸ್ತ್