ಉಡುಪಿ: ಉಡುಪಿಯ ಹಿರೇಬೆಟ್ಟು ಗ್ರಾಮದ ಕಂಚಿನಬೈಲು ಎಂಬಲ್ಲಿ ಚಿರತೆಯೊಂದು ಹಂದಿ ಉರುಳಿಗೆ ಸಿಲುಕಿ ಮೃತಪಟ್ಟಿದೆ.
ಇಲ್ಲಿನ ಸರ್ಕಾರಿ ಭೂಮಿಯಲ್ಲಿ ಯಾರೋ ಬೇಟೆಗಾರರು ಹಂದಿಯನ್ನು ಕೊಲ್ಲುವುದಕ್ಕಾಗಿ ತಂತಿಯ ಉರುಳನ್ನು ಕಟ್ಟಿದ್ದರು. ಆದರೆ ಅದರಲ್ಲಿ ಚಿರತೆ ಸಿಕ್ಕಿಹಾಕಿಕೊಂಡು ಒದ್ದಾಡಿ ಸಾವನ್ನಪ್ಪಿದೆ. ತಂತಿ ಉರುಳನ್ನು ಮರಕ್ಕೆ ಕಟ್ಟಲಾಗಿತ್ತು, ಆ ದಾರಿಯಲ್ಲಿ ಬಂದ ಚಿರತೆ ಉರುಳು ಕಾಣದೆ, ಮೇಲಿನಿಂದ ತಗ್ಗಿಗೆ ಇಳಿಯುವಾಗ ಉರುಳಿನಲ್ಲಿ ಸಿಲುಕಿದೆ. ಆಗ ಉರಳು ಸೊಂಟಕ್ಕೆ ಬಿಗಿದು, ಚಿರತೆ ತಗ್ಗಿನಲ್ಲಿ ನೇತಾಡುತ್ತಾ, ನೆಲ ಮುಟ್ಟುವುದಕ್ಕೆ ಶತಪ್ರಯತ್ನ ಮಾಡಿದೆ. ಉರುಳಿನಿಂದ ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಾ ಅಲ್ಲಿಯೇ ಪ್ರಾಣ ಬಿಟ್ಟಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದು, ಸ್ಥಳವನ್ನು ಮಹಜರು ಮಾಡಿದ್ದಾರೆ ಮತ್ತು ಇಲಾಖೆಯ ನಿಯಮಗಳಂತೆ ಚಿರತೆಯನ್ನು ಬೇರೆಡೆಗೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಸುಮಾರು 3 ತಿಂಗಳಿಂದ ಈ ಭಾಗದಲ್ಲಿ ಓಡಾಡುತ್ತಿದ್ದ ಚಿರತೆ ಅನೇಕ ಸಾಕು ನಾಯಿಗಳನ್ನು ಕೊಂದು ಹಾಕಿದೆ. ಮಣಿಪಾಲದಿಂದ ಕಾರ್ಮಿಕರು ಸಂಜೆ ಈ ಭಾಗದಲ್ಲಿ ಮನೆಗೆ ಹಿಂತಿರುವಾಗ ಅನೇಕ ಮಂದಿಗೆ ಚಿರತೆ ಎದುರಾಗಿದೆ. ಇದರಿಂದ ಚಿರತೆ ಸ್ಥಳೀಯರ ಭೀತಿಗೂ ಕಾರಣವಾಗಿತ್ತು.