ಕುಂದಾಪುರ: ಲಾಡ್ಜ್ ಒಂದರಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ದಾಳಿ ನಡೆಸಿದ ಬೈಂದೂರು ಪೊಲೀಸರು ಗಾಂಜಾ ಸಮೇತ ಐವರು ಆರೋಪಿಗಳನ್ನು ಬಂಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಂಧಿತರನ್ನು ಬ್ರಹ್ಮಾವರದ ಮಟಪಾಡಿ ನಿವಾಸಿ ಯೋಗೇಶ್ ಗಾಣಿಗ(24), ಕೇರಳ ತಿರುವನಂತಪುರಂ ನಿವಾಸಿ ಯದುನಾರಾಯಣ(21), ಬೈಂದೂರು ಬಿಜೂರು ನಿವಾಸಿ ಗುರುರಾಜ್ ಪೂಜಾರಿ(25), ಉಪ್ಪುಂದ ನಿವಾಸಿ ಸುನಿಲ್ ಪೂಜಾರಿ(26) ಮತ್ತು ಬಿಜೂರು ನಿವಾಸಿ ರವಿ(25) ಎಂದು ಗುರುತಿಸಲಾಗಿದೆ.
ಸೆಪ್ಟಂಬರ್ 2ರಂದು ಬೆಳಗ್ಗಿನ ಜಾವ 3 ಗಂಟೆಗೆ ಬೈಂದೂರು ಪೊಲಿಸ್ ವೃತ್ತ ನಿರೀಕ್ಷಕ ಸುರೇಶ್ ಜಿ. ನಾಯಕ್ ಅವರಿಗೆ ದೊರಕಿದ ಅಧಿಕೃತ ಮಾಹಿತಿ ಆಧರಿಸಿ ಉಪ್ಪುಂದದ ಪ್ರಸಿದ್ಧ ಲಾಡ್ಜ್ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ಸಂದರ್ಭ ಲಾಡ್ಜಿನ ರೂಮಿನೊಳಗೆ ಗಾಂಜಾ ಸೇವಿಸುತ್ತಿದ್ದುದು ಪತ್ತೆಯಾಗಿದೆ.
ಅಲ್ಲದೇ, ಆರೋಪಿ ಯೋಗೇಶ್ ಗಾಣಿಗ ಎಂಬಾತನ ಬ್ಯಾಗಿನಲ್ಲಿ 40 ಗ್ರಾಂ ಗಾಂಜಾ ಪತ್ತೆಯಾಗಿದೆ. ದಾಳಿ ಸಂದರ್ಭ ಆರೋಪಿಗಳಿಗೆ ಭಟ್ಕಳ ಮೂಲದ ಶಬೀರ್ ಎಂಬಾತ ಗಾಂಜಾ ಸರಬರಾಜು ಮಾಡುತ್ತಿದ್ದ ಎನ್ನುವುದು ತಿಳಿದು ಬಂದಿದೆ. ಬ್ಯಾಗಿನಲ್ಲಿ ಗಾಂಜಾ ಸೇವಿಸಲು ಬಳಸುವ ಒಸಿಬಿ ಸ್ಲಿಮ್ ಪ್ರೀಮಿಯಂ ಎನ್ನುವ ಕಾಗದದ ಚೂರುಗಳು ಪತ್ತೆಯಾಗಿವೆ. ಆರೋಪಿತರಿಂದ 6 ಮೊಬೈಲ್ ಫೋನ್ಗಳು, 3 ದ್ವಿಚಕ್ರ ವಾಹನಗಳು ಸೇರಿದಂತೆ ರೂ. 1,71,500.00 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.