ಉಡುಪಿ: ಬಾರ್, ವೈನ್ ಶಾಪ್ಗಳಿಗೆ ದೇವರ ಹೆಸರಿಡುವುದಕ್ಕೆ ಜನರಿಂದ ವಿರೋಧ ಬಂದಿದೆ. ನಾನು ಮುಜರಾಯಿ ಇಲಾಖೆ ಕಾರ್ಯದರ್ಶಿಗೆ ಒಂದು ಟಿಪ್ಪಣಿ ಕಳುಹಿಸಿದ್ದೇನೆ, ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ದೇವರ ಹೆಸರಿನ ಮದ್ಯದಂಗಡಿಗಳಿಗೆ ಮರು ನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮುಜರಾಯಿ ಇಲಾಖೆ ಕಾರ್ಯದರ್ಶಿಗೆ ಒಂದು ಟಿಪ್ಪಣಿ ಕಳುಹಿಸಿದ್ದೇನೆ. ಸಾರ್ವಜನಿಕರಿಂದ ಬಂದಿರುವ ಅಭಿಪ್ರಾಯಕ್ಕೆ ಅಧಿಕಾರಿಗಳಿಂದ ಕಡತ ಸಿದ್ಧಪಡಿಸಲು, ಅಬಕಾರಿ ಮತ್ತು ಕಾನೂನು ಇಲಾಖೆ ಜೊತೆ ಚರ್ಚೆ ಮಾಡಲು ಸೂಚನೆ ನೀಡಿದ್ದೇನೆ. ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ಇದೆ, ಸಾರ್ವಜನಿಕ ಅಭಿಪ್ರಾಯಕ್ಕೆ ಕೂಡಾ ಅವಕಾಶ ಇದೆ. ಅಭಾಸ ಹೆಸರು ಬದಲಿಸುವ ಚಿಂತನೆ ಮುಜರಾಯಿ ಇಲಾಖೆ ಮುಂದೆ ಇದೆ ಎಂದರು.
ಬಾರ್ ಒಳಗೆ ದೇವರ ಫೋಟೋ ಇಡಬೇಡಿ ಅಂದಿಲ್ಲ. ದೇವರ ಹೆಸರಿರುವರು ಕುಡಿಯಬಹುದಾ? ದೇವರ ಹೆಸರಿನವರನ್ನು ಮದ್ಯದಂಗಡಿಯಿಂದ ವಾಪಾಸ್ ಕಳುಹಿಸಬೇಕಾ ಅಂತ ನೀವು ಪ್ರಶ್ನೆ ಮಾಡಬಹುದು?. ಸರಕಾರ ಈ ಕುರಿತು ಈವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಅಬಕಾರಿ, ಕಾನೂನು ಇಲಾಖೆ ಒಪ್ಪದಿದ್ದರೆ ನಾವೇನು ಮಾಡೋಕಾಗಲ್ಲ ಎಂದರು.
ಸಿದ್ದರಾಮಯ್ಯ ವಿಪಕ್ಷ ನಾಯಕ. ಟೀಕೆ ಮಾಡುವುದೇ ಅವರ ಕೆಲಸ. ಟಿಪ್ಪು ಜಯಂತಿಯನ್ನು ಹೇಳಿದಂತೆ ರದ್ದು ಮಾಡಿದ್ದೇವೆ. ಟಿಪ್ಪು ಪಠ್ಯ ರದ್ದು ಅದರ ಮುಂದುವರಿದ ಭಾಗ ಎಂದು ಹಾಗೂ ಉಪಚುನಾವಣೆಯಲ್ಲಿ ಹೊಂದಾಣಿಕೆ ಇಲ್ಲ. 15 ಕ್ಷೇತ್ರದಲ್ಲಿ ಯಾವುದೇ ಒಳ ಒಪ್ಪಂದ ಆಗಿಲ್ಲ. ಅತ್ಯಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಇದೇ ವೇಳೆ ಶ್ರೀನಿವಾಸ ಪೂಜಾರಿ ಹೇಳಿದರು.