ಉಡುಪಿ: ಉತ್ಸವ ಕೋಟಿ ಋಷಿಗಳ ತಪೋಭೂಮಿ ಉಡುಪಿ ಜಿಲ್ಲೆಯ ಕೋಟೇಶ್ವರದ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆದಿದೆ.
ಪ್ರತಿ ವರ್ಷ ಭಾರೀ ವಿಜೃಂಭಣೆಯಿಂದ ಜರುಗುವ ಈ ಹಬ್ಬ ಜಿಲ್ಲೆಯಲ್ಲಿ ಕೊಡಿಹಬ್ಬ ಮದುಮಕ್ಕಳ ಜಾತ್ರೆಯೆಂದೇ ಪ್ರಸಿದ್ಧಿ. ನವಜೀವನಕ್ಕೆ ಕಾಲಿರಿಸಿದ ಸಹಸ್ರಾರು ವಧು-ವರರು ಕೊಡಿಹಬ್ಬದ ದಿನ ಕೋಟಿತೀರ್ಥದಲ್ಲಿ ತೀರ್ಥ ಸ್ನಾನ ಮಾಡಿ ಕೋಟಿ ಲಿಂಗರೂಪಿ ಶಿವನಿಗೆ ಹಣ್ಣು ಕಾಯಿ ಒಪ್ಪಿಸಿ ಪೂಜೆ ಮಾಡಿ ಕಬ್ಬಿನ ಕೊಡಿಯನ್ನು ಮನೆಗೆ ತೆಗೆದುಕೊಂಡು ಹೋಗುವುದು ಪದ್ಧತಿ. ಈ ಕೊಡಿಯನ್ನು ಮನೆಯಲ್ಲಿ ನೆಟ್ಟು ಬೆಳೆಸಿದರೆ ತಮ್ಮ ವಂಶಾಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಾವಿರಾರು ಜೋಡಿಗಳು ಕೊಡಿ ಹಬ್ಬದಲ್ಲಿ ಪಾಲ್ಗೊಂಡು ಮಹಾರಥೋತ್ಸವದಲ್ಲಿ ಭಾಗವಹಿಸಿ ಕೋಟಿಲಿಂಗೇಶ್ವರ ಕೃಪಾಕಟಾಕ್ಷಕ್ಕೆ ಪಾತ್ರರಾದರು.
ಇನ್ನು ಕೋಟಿ ಋಷಿಗಳು ಇಲ್ಲಿ ತಪಸ್ಸು ಮಾಡಿದ್ದರು ಎಂಬ ಐತಿಹ್ಯದ ಪ್ರಕಾರ ಈ ಸನ್ನಿಧಾನಕ್ಕೆ ಕೋಟಿಲಿಂಗೇಶ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ನಾಲ್ಕೈದು ದಶಕಗಳ ಹಿಂದೆ ಈ ಹಬ್ಬ ಒಂದೂವರೆ ತಿಂಗಳ ಕಾಲ ನಡೆಯುತ್ತಿತ್ತು. ಆದರೆ ಈಗ ಜನ ಜಾತ್ರೆಯಲ್ಲಿ ಮನರಂಜನೆ ದೃಷ್ಟಿಯಿಂದ ಭಾಗವಹಿಸುವ ನಿಟ್ಟಿನಲ್ಲಿ ಈ ಸಂಭ್ರಮ 7 ದಿನಕ್ಕೆ ಸೀಮಿತಗೊಂಡಿದೆ.