ಕಾರ್ಕಳ(ಉಡುಪಿ): 37 ದಿನಗಳ ಚಿಕಿತ್ಸೆ ನಂತರ ಕೋವಿಡ್ ಮುಕ್ತರಾದ ತಾಯಿ-ಮಗ ಇಬ್ಬರನ್ನು ಮಂಗಳೂರು ಜಿಲ್ಲಾಡಳಿತ ತಂದು ಕಾರ್ಕಳದಲ್ಲಿನ ಅವರ ಮನೆಗೆ ಬಿಟ್ಟು ಹೋಗಿದೆ. ಆದರೆ ಈ ಬಗ್ಗೆ ಉಡುಪಿ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ಯಡವಟ್ಟು ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ.
ತಾಲೂಕಿನ ಸಾಣೂರು ನಿವಾಸಿಗಳಾದ ತಾಯಿ-ಮಗನ ವಿಚಾರದಲ್ಲಿ ಇಂತಹ ಅನಾಹುತವಾಗಿದೆ. ಪಕ್ಷವಾತದಿಂದ ನರಳುತ್ತಿದ್ದ 55 ವರ್ಷದ ತಾಯಿಯನ್ನು ಮಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ಈ ವೇಳೆ ಕೊರೊನಾ ಸೋಂಕು ತಗುಲಿದ್ದು, ತಾಯಿ-ಮಗನನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. 37 ದಿನಗಳ ಕಾಲ ಕೋವಿಡ್ ಚಿಕಿತ್ಸೆ ನೀಡಿದ್ದು, ಸಂಪೂರ್ಣ ಗುಣಮುಖರಾದ ಇಬ್ಬರನ್ನೂ ಮಂಗಳೂರು ಜಿಲ್ಲಾಡಳಿತ ಬಿಡುಗಡೆಗೊಳಿಸಿ ಉಡುಪಿ ಜಿಲ್ಲಾಡಳಿತಕ್ಕಾಗಲಿ, ಸ್ಥಳೀಯ ಅಧಿಕಾರಿಗಳು, ಸ್ಥಳೀಯರಿಗಾಗಲಿ ಯಾರಿಗೂ ಮಾಹಿತಿ ನೀಡಿದೆ ಆ್ಯಂಬುಲೆನ್ಸ್ನಲ್ಲಿ ಅವರ ನಿವಾಸಕ್ಕೆ ಬುಧವಾರ ತಂದು ಬಿಡಲಾಗಿದೆ ಎನ್ನಲಾಗಿದೆ.
ತಿಂಗಳಾನುಗಟ್ಟಲೆ ಮನೆಯಲ್ಲಿ ದವಸ ಧಾನ್ಯ ಏನೂ ಇಲ್ಲದ ಹಿನ್ನೆಲೆ ತಿನ್ನಲು ಕೂಳಿಲ್ಲದೆ, ಇತ್ತ ತಾಯಿ ಪಕ್ಷವಾತದಿಂದ ಗುಣಮುಖರಾಗದೆ ಇವರ ಪರಿಸ್ಥಿತಿ ಹೇಳತೀರದಾಗಿತ್ತು. ವಿಚಾರ ತಿಳಿದ ಪಂಚಾಯತ್ ಪಿಡಿಒ ಮಧು ಸಂತ್ರಸ್ತರ ಮನೆಗೆ ಭೇಟಿ ನೀಡಿ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ.