ಉಡುಪಿ: ಡ್ರಗ್ಸ್ ಸೇವನೆ ವಿಚಾರ ಸದ್ಯ ಸೆಲೆಬ್ರಿಟಿಗಳ ಸುತ್ತ ಸುತ್ತುತ್ತಿದೆ. ರಾಜ್ಯದಲ್ಲಿ ಡ್ರಗ್ಸ್ ಹಬ್ಗಳು ಸಾಕಷ್ಟಿವೆ. ಅದರಲ್ಲಿ ಉಡುಪಿ ಜಿಲ್ಲೆಯ ಎಜ್ಯುಕೇಷನ್ ಸಿಟಿ ಮಣಿಪಾಲ ಕೂಡ ಒಂದು. ರಾಜ್ಯಮಟ್ಟದಲ್ಲಿ ನಡೆದ ಅನೇಕ ವಿಚಾರಣೆಗಳ ವೇಳೆ ಮಣಿಪಾಲದ ಡ್ರಗ್ಸ್ ಲಿಂಕ್ ಜಗಜ್ಜಾಹೀರಾಗಿದೆ. ಈ ನಡುವೆ ಮಣಿಪಾಲದಲ್ಲಿ ಉಡುಪಿ ಪೊಲೀಸರು ಓರ್ವ ಖತರ್ನಾಕ್ ಡ್ರಗ್ಸ್ ಪೆಡ್ಲರ್ನನ್ನು ಬಂಧಿಸಿದ್ದಾರೆ.
ರಾಜ್ಯದ ಪ್ರಮುಖ ಡ್ರಗ್ಸ್ ಹಬ್ಗಳಲ್ಲಿ ಉಡುಪಿ ಜಿಲ್ಲೆಯ ಮಣಿಪಾಲ ಮುಂಚೂಣಿಯಲ್ಲಿದೆ. ವಿದ್ಯಾನಗರಿ ಮಣಿಪಾಲದಲ್ಲಿ ಸುಮಾರು 56 ರಾಷ್ಟ್ರಗಳ ವಿದ್ಯಾರ್ಥಿಗಳು ಕಲಿಕೆಗೆ ಬರುತ್ತಾರೆ. ಇವರಲ್ಲಿ ವಿದೇಶೀಯರ ಜೊತೆಗೆ ಉತ್ತರ ಭಾರತೀಯರದ್ದೇ ಸಿಂಹಪಾಲು.
ಇದೀಗ ಮಣಿಪಾಲ ಪೊಲೀಸರು ಡ್ರಗ್ಸ್ ಪೆಡ್ಲರ್, ನೋಯ್ಡಾ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. 20 ವರ್ಷದ ಹಿಮಾಂಶು ಜೋಷಿ ಬಂಧಿತ ಆರೋಪಿ. ಈತ ಮಣಿಪಾಲ ಎಂಐಟಿ ಕಾಲೇಜಿನ ಇನ್‌ಸ್ಟ್ರುಮೆಂಟೇಶನ್ ಆ್ಯಂಡ್ ಕಂಟ್ರೋಲ್ ವಿಭಾಗದ 7ನೇ ಸೆಮಿಸ್ಟರ್‌ನ ವಿದ್ಯಾರ್ಥಿಯಾಗಿದ್ದಾನೆ.
ಈತನ ವಿಚಾರಣೆ ವೇಳೆ ಮಣಿಪಾಲ ಪೊಲೀಸರೇ ದಂಗಾಗಿದ್ದಾರೆ. ಡಾರ್ಕ್ ನೆಟ್ಗಳನ್ನು ಬಳಸಿ ವಿದೇಶಗಳಿಂದ ಕೊರಿಯರ್ ತರಿಸಿಕೊಂಡ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಬರೋಬ್ಬರಿ 498 ಎಂಡಿಎಂಎ (ನಿಷೇಧಿತ ನಿದ್ರಾಜನಕ) ಮಾತ್ರೆಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಅಕ್ರಮವಾಗಿ ಆನ್‌ಲೈನ್ ಮೂಲಕ ಎಂಡಿಎಂಎ ಮಾತ್ರೆಗಳನ್ನು ತರಿಸಿ, ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಡ್ರಗ್ಸ್ ಜಾಲವನ್ನು ಬೇಧಿಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಈ ಕಾರ್ಯಾಚರಣೆ ನಡೆದಿರುವ ಸಾಧ್ಯತೆಯೂ ಇದೆ. ಸದ್ಯ ಓರ್ವ ಆರೋಪಿ ಸಿಕ್ಕಿದ್ದು, ಮತ್ತೋರ್ವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ದಂಧೆಯಲ್ಲಿ ಇನ್ನಷ್ಟು ಜನರಿರುವ ಸಾಧ್ಯತೆಗಳಿದ್ದು, ಪೊಲೀಸರು ಆರೋಪಿಯನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ತನಿಖೆ ತೀವ್ರಗೊಳಿಸಿದ್ದಾರೆ.
ಮಣಿಪಾಲದಲ್ಲಿ ವಿದ್ಯಾರ್ಥಿಗಳು ತಮ್ಮ ಮೋಜು ಹಾಗೂ ಮನರಂಜನೆಗಾಗಿ ಲಾಡ್ಜ್ನಲ್ಲಿ ರೂಂ ಬಾಡಿಗೆಗೆ ಪಡೆದು ಲಿಕ್ಕರ್, ಗಾಂಜಾ, ಇಸ್ಪೀಟ್ ಆಡುವುದು ಮಾಮೂಲು. ಹಾಗಾಗಿ ಮೊದಲ ಹಂತದಲ್ಲಿ ಇದೀಗ ಎಲ್ಲಾ ಲಾಡ್ಜ್ಗಳಿಗೂ ನೋಟಿಸ್ ನೀಡಲಾಗಿದೆ.
ಈ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗಾಗಲೇ ಮಣಿಪಾಲ ಠಾಣೆಯಲ್ಲಿ 99 ಗಾಂಜಾ ಸೇವನೆ ಹಾಗೂ ಐದು ಗಾಂಜಾ ಮಾರಾಟ ಯತ್ನ ಪ್ರಕರಣಗಳು ದಾಖಲಾಗಿದ್ದು, 106 ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಕೊರೊನಾ ಕಾರಣಕ್ಕೆ ಮಣಿಪಾಲ ವಿವಿಯ ಇಪ್ಪತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತವರಿಗೆ ತೆರಳಿದ್ದಾರೆ. ಆದರೂ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಇಲ್ಲೇ ತಂಗಿದ್ದಾರೆ. ಈ ವೇಳೆಯಲ್ಲೂ ಪ್ರಕರಣಗಳು ಪತ್ತೆಯಾಗಿವೆ.
ಕಾಲೇಜುಗಳು ರೀ ಓಪನ್ ಆದ್ರೆ ಪ್ರಕರಣಗಳು ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಸದ್ಯ ಆಯಕಟ್ಟಿನ ಸ್ಥಳಗಳಲ್ಲಿ ಮಣಿಪಾಲ ಪೊಲೀಸರು ವಿಶೇಷ ನಿಗಾ ಇರಿಸಿದ್ದಾರೆ. ಎಲ್ಲಾ ಲಾಡ್ಜ್ ಮಾಲೀಕರ ವಾಟ್ಸಪ್ ಸಂಖ್ಯೆ ಪಡೆದು ನಿರಂತರ ಸಂಪರ್ಕದಲ್ಲಿದ್ದಾರೆ. ಈ ಮೂಲಕ ಪೊಲೀಸರ ಸಲಹೆ ಸೂಚನೆಗಳು ನಿರಂತರ ವಿನಿಮಯವಾಗಲಿದೆ. ಲಾಡ್ಜ್ನ ಒಳಗೆ ಮತ್ತು ಹೊರಗೆ ಸಾಕಷ್ಟು ಬೆಳಕಿನ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.
ಬಂಧಿತನಾಗಿರುವ ನೋಯ್ಡಾ ಮೂಲದ ಡ್ರಗ್ಸ್ ಪೆಡ್ಲರ್ನ ವಿಚಾರಣೆ ತೀವ್ರಗೊಂಡಿದೆ. ಸುಧಾರಿತ ಸಿಂಥೆಟಿಕ್ ಡ್ರಗ್ಸ್ಗಳೇ ಮಣಿಪಾಲದಲ್ಲಿ ಚಲಾವಣೆಯಲ್ಲಿದ್ದು, ಈತನ ಹಿಂದೆ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿರುವ ಸಾಧ್ಯತೆಯಿದ್ದು ತನಿಖೆ ತೀವ್ರಗೊಂಡಿದೆ. ಆನ್‌ಲೈನ್ ಮೂಲಕವೇ ಈ ಮಾದಕ ವ್ಯವಹಾರ ನಡೆಯುತ್ತಿದ್ದು, ಡಾರ್ಕ್ ನೆಟ್ಗಳ ಮೇಲೆ ಹಿಡಿತ ಸಾಧಿಸುವುದು ಪೊಲೀಸ್ ಇಲಾಖೆಗೆ ಸವಾಲಾಗಿದೆ.