ಕುಂದಾಪುರ: ತಾಲೂಕಿನ ಗುಲ್ವಾಡಿ ಸೌಕೂರು ಕಂಬಳದ ಗದ್ದೆಯ ಬಳಿ ಅಪರೂಪದ ಶಾಸನ ಪತ್ತೆಯಾಗಿದೆ.
ಅಪ್ಪಣ್ಣ ಶೆಟ್ಟಿ ಎನ್ನುವವರ ಮನೆಯ ಬಳಿಯಿರುವ ಬರದ್ಕಲ್ ಗದ್ದೆಯಲ್ಲಿ ಶಾಸನ ಪತ್ತೆಯಾಗಿದ್ದು, ಇದರ ಮೇಲೆ ಶಿವಲಿಂಗ, ಸೂರ್ಯ, ಚಂದ್ರ, ಆನೆ, ಲಿಂಗದ ಮೇಲೆ ಪುಷ್ಪವನ್ನು ಸಮರ್ಪಿಸುವ ಸನ್ನಿವೇಶ ಕಂಡು ಬಂದಿದೆ. ಶಾಸನದ ಮೇಲೆ ಅಕ್ಷರಗಳು ಕಂಡು ಬಂದಿದ್ದು, ಅಸ್ಪಷ್ಟವಾಗಿವೆ. ಇದನ್ನು ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹೆಚ್ಚಿದ್ದು, ಸಂಪೂರ್ಣ ಮಾಹಿತಿ ಅಧ್ಯಯನ ಬಳಿಕವಷ್ಟೆ ಲಭ್ಯವಾಗಲಿದೆ.
ವಿಜಯನಗರ ಕಾಲದ ಶಿಲಾ ಶಾಸನ ಪತ್ತೆ :
ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ಸಮೀಪ ಮತ್ತೊಂದು ಶಾಸನ ಪತ್ತೆಯಾಗಿದ್ದು, ಭೋಗರಮಕ್ಕಿ ನವೀನ್ ಕುಲಾಲ್ ಎಂಬುವವರ ಅಡಿಕೆ ತೋಟದಲ್ಲಿ ವಿಜಯನಗರ ಕಾಲದ ಶಾಸನ ಸಿಕ್ಕಿದೆ.
ಈ ಶಿಲಾ ಶಾಸನದ ಬಗ್ಗೆ ಪುರಾತತ್ವ ತಜ್ಞರಾದ ಪ್ರೋ.ಮುರುಗೇಶಿ ಅವರು ಮಾಹಿತಿ ನೀಡಿದ್ದು, ಶಾಸನಗಳಲ್ಲಿ ಸೂರ್ಯ, ಚಂದ್ರ, ದೀಪ, ನಂದಿ, ಶಿವ ಲಿಂಗ, ಆಂಜನೇಯನ ಕೆತ್ತನೆ ಇರುವುದು ವಿಶೇಷವಾಗಿದೆ. ಶಾಸನ ಪತ್ತೆ ಮಾಡಿದ ಪ್ರದೀಪ್ ತಂಡಕ್ಕೆ ಪುರಾತತ್ವ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.