ಉಡುಪಿ: ಕುಂದಾಪುರ ತಾಲೂಕಿನ ಮಣೂರು ಸರ್ಕಾರಿ ಶಾಲೆಯ ನೂತನ ಕಟ್ಟಡ ಮತ್ತು ಸಭಾಂಗಣವನ್ನು ಉದ್ಘಾಟಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿನಿಂದ ಬಂದಿದ್ದರು. ರಾಜಧಾನಿಯಿಂದ ಬಂದರೂ ಕಟ್ಟಡ ಉದ್ಘಾಟನೆ ಮಾಡಿದ್ದು ಮಾತ್ರ ಶಾಲೆಯ ಮಕ್ಕಳು. ಸಚಿವರು ಮಕ್ಕಳ ಕೈಯಲ್ಲೇ ನೂತನ ಕೊಠಡಿಗಳು, ಸಭಾಂಗಣವನ್ನು ಉದ್ಘಾಟನೆ ಮಾಡಿಸಿದರು.
ಈ ವೇಳೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಮಕ್ಕಳಿಗಾಗಿ ಇರುವ ಶಾಲೆಯನ್ನು ಮಕ್ಕಳೇ ಉದ್ಘಾಟಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಇಲಾಖೆ ಮೂಲಕ ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ನಾಲ್ಕು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ವಾರಕ್ಕೊಂದು ದಿನ ಪಠ್ಯೇತರ ಚಟುವಟಿಕೆ ಕಡ್ಡಾಯ ಮಾಡುವ ಜೊತೆಗೆ ಶಾಲಾ ಬ್ಯಾಗ್ ಹೊರೆ ಮುಂದಿನ ವರ್ಷದಿಂದ ಕಡಿಮೆಯಾಗಲಿದೆ. ಶಿಕ್ಷಕರಲ್ಲದ ಇತರ ತಜ್ಞರು ಮಕ್ಕಳಿಗೆ ಪಾಠ ಮಾಡುವ ಅವಕಾಶ ಕಲ್ಪಿಸಲು ನೂತನ ಆ್ಯಪ್ ಮಾಡುವುದಾಗಿ ಮತ್ತು ಶಿಕ್ಷಕರು, ಪೋಷಕರು ಮತ್ತು ಮಕ್ಕಳ ಉಪಯೋಗಕ್ಕೆ ಸಹಾಯವಾಣಿ ತೆರೆಯುವುದಾಗಿ ಹೇಳಿದರು.