ಉಡುಪಿ: ಡಿ. 5 ರಂದು ಎಲ್ಲಾ ಸರ್ಕಾರಿ ಕಚೇರಿಗಳು ದಿನನಿತ್ಯದಂತೆ ನಡೆಯುತ್ತವೆ. ಬಂದ್ ಮಾಡಬೇಡಿ ಎಂದು ಸಿಎಂ ಜೊತೆ ನಾನೂ ಮನವಿ ಮಾಡ್ತೇನೆ. ಇಷ್ಟರ ಮೇಲೆ ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆ ಹಾಗು ಭದ್ರತೆಗೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹೊಸ ವರ್ಷಾಚರಣೆಗೆ ತಡೆ ವಿಚಾರದಲ್ಲಿ ಮಾತನಾಡಿದ ಅವರು, ನೈಟ್ ಕರ್ಫ್ಯೂ ಬಗ್ಗೆ ಯಾವುದೇ ಸಭೆ ಕರೆದಿಲ್ಲ. ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ. ಇವತ್ತು ಅಥವಾ ನಾಳೆ ಸರ್ಕಾರ ಒಂದು ತೀರ್ಮಾನ ಮಾಡುತ್ತದೆ. ನೈಟ್ ಕರ್ಫ್ಯೂ ಹೊರತಾಗಿಯೂ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.
ಓದಿ: ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ಜಾರಿಯಾಗಲಿದೆ: ಬೊಮ್ಮಾಯಿ
ಕೆ.ಜೆ. ಹಳ್ಳಿ ಪ್ರಕರಣದಲ್ಲಿ ಜಾಕಿರ್ ಬಂಧನ ವಿಚಾರವಾಗಿ ಮಾತನಾಡಿದ ಅವರು, ಇವತ್ತು ರಜೆ ಇದೆ, ನಾಳೆ ಆತನನ್ನು ನ್ಯಾಯಾಲಯಕ್ಕೆ ಹಾಜರು ಮಾಡಿ, ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತೇವೆ ಎಂದರು.
ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಕೋಲಾರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಸ್ಪಾಟ್ ವಿಸಿಟ್, ಟವರ್ ಡಂಪಿಂಗ್ ಮಾಡಿ ಎಲ್ಲಾ ರೀತಿಯಲ್ಲೂ ತನಿಖೆ ನಡೆಯಲಿದೆ ಎಂದರು.