ಉಡುಪಿ : ಕಾಲಲ್ಲಿ ಬಲವಿಲ್ಲದ ಹಸುವನ್ನು ಮನೆ ಮಗಳಂತೆ ಸಾಕುತ್ತಿರುವ ಉಡುಪಿಯ 'ಹೊಸಬೆಳಕು' ಆಶ್ರಮದ ನಿವಾಸಿಗಳು 'ಗೌರಿ'ಯನ್ನು ನವ ವಧುವಿನಂತೆ ಸಿಂಗರಿಸಿ ಸೀಮಂತ ಕಾರ್ಯ ಮಾಡಿದ್ದು ಮೆಚ್ಚುಗೆಗೆ ಕಾರಣವಾಗಿದೆ.
ಕಳೆದ ಇಪ್ಪತ್ತು ದಿನಗಳ ಹಿಂದೆ ಮಣಿಪಾಲ ಜಿಲ್ಲಾಡಳಿತದ ಕಚೇರಿ ಬಳಿ ಅಪಘಾತ ಒಂದರಲ್ಲಿ ಗಂಭೀರವಾಗಿ ಗಾಯಗೊಂಡ ಹಸು ಪತ್ತೆಯಾಗಿದೆ. ಅಸಹಾಯಕ ಸ್ಥಿತಿಯಲ್ಲಿದ್ದ ಈ ಹಸುವನ್ನು ಕಂಡ ಜನರು ಜಿಲ್ಲಾ ನಾಗರಿಕ ಸಮಿತಿಗೆ ತಿಳಿಸಿದ್ದರು. ಅವರು ಗೋವನ್ನು ರಕ್ಷಿಸಿ, ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಒದಗಿಸಿದ್ದಾರೆ.
ಗಂಭೀರ ಆರೋಗ್ಯ ಸ್ಥಿತಿಯಲ್ಲಿದ್ದ ಹಸುವಿನ ಚಿಕಿತ್ಸೆ, ಆರೈಕೆಯನ್ನು ಆಶ್ರಮ ಸಂಚಾಲಕ ವಿನಯಚಂದ್ರ ಮಾಡಿದ್ದಾರೆ. ನಡೆಯಲಾಗದ ಸ್ಥಿತಿಯಲ್ಲಿದ್ದ ದನಕ್ಕೆ ಬೇಕಾಗುವಂತಹ ‘ನಡಿಗೆ ಯಂತ್ರ’ ವನ್ನು ಬಳಸಿಕೊಂಡು ನಡೆದಾಡುವಂತೆ ಮಾಡಿದ್ದಾರೆ. ಆಶ್ರಮವಾಸಿಗಳ ಪ್ರೀತಿಗೆ ಒಳಗಾದ ಗೋವಿಗೆ 'ಗೌರಿ' ಎಂದು ನಾಮಕರಣವನ್ನೂ ಮಾಡಿದ್ದಾರೆ.
ಓದಿ: ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿಯಿಂದ ನೋಟಿಸ್
ಈಗ ಗೌರಿ ತುಂಬು ಗರ್ಭಿಣಿ. ಶಾಸ್ತ್ರಬದ್ಧವಾಗಿಯೇ ಗೌರಿಯ ಸೀಮಂತ ಮಾಡಿರುವ ಆಶ್ರಮ ನಿವಾಸಿಗಳು, ಸ್ನಾನ ಮಾಡಿಸಿ, ಶೃಂಗರಿಸಿ ನಡಿಗೆ ಯಂತ್ರದ ಸಹಾಯದಿಂದ ಮಂಟಪಕ್ಕೆ ಕರೆತಂದು, ಹಸಿರು ಬಣ್ಣದ ಸೀರೆಯನ್ನು ಮೈಮೇಲೆ ಹರಡಿ, ರವಿಕೆ ಕಣ, ಅಕ್ಕಿ, ತೆಂಗಿನಕಾಯಿ ಮೊದಲಾದ ಸಾಮಗ್ರಿಗಳೊಂದಿಗೆ ಗೌರಿಯ ಮಡಿಲು ತುಂಬಿಸಿದರು.
ಮೊಳಕೆ ಬರಿಸಿದ ನವಧಾನ್ಯಗಳು, ವಿಧವಿಧ ಹಿಂಡಿಗಳು ಹಾಗೂ ಬಯಕೆಯ ಖಾದ್ಯಗಳನ್ನು ಬಡಿಸಿ, ಪಂಚ ಮುತ್ತೈದೆಯರು ಆರತಿ ಬೆಳಗಿದರು. ಆಶ್ರಮದ ಸದಸ್ಯರು ಮನೆ ಮಗಳ ಸಂತೋಷದಲ್ಲಿ ಭಾಗಿಯಾಗಿ ತಮಗಾರೂ ಇಲ್ಲವೆಂಬ ನೋವನ್ನು ಅರೆಕ್ಷಣ ಮರೆತರು.