ಉಡುಪಿ : ಜಿಲ್ಲೆಯ ಕುಂದಾಪುರದ ವಿವಿಧ ಕಾಲೇಜಿನಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಮುಂದುವರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಅನೇಕ ಕಾಲೇಜುಗಳ ಆಡಳಿತ ಮಂಡಳಿಗಳು ಪೋಷಕರೊಂದಿಗೆ ತುರ್ತು ಸಭೆ ನಡೆಸಿವೆ.
ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜು ಶೈಕ್ಷಣಿಕ ಆಡಳಿತ ಮಂಡಳಿ ಪೋಷಕರೊಂದಿಗೆ ತುರ್ತು ಸಭೆ ನಡೆಸಿತು. ಈ ವೇಳೆ ಪೋಷಕರೊಬ್ಬರು ಮಾತನಾಡಿ, ಪೋಷಕರು, ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಮನವಿ ಪತ್ರವನ್ನು ಕೊಟ್ಟಿದ್ದೇವೆ.
ತಲೆಗೆ ಸ್ಕಾರ್ಫ್ ತೊಡಲು ಅವಕಾಶ ಕೋರಿದ್ದೇವೆ. ಪ್ರಾಂಶುಪಾಲರಿಂದ ಉತ್ತಮ ಫಲಿತಾಂಶ ಬರಬಹುದು. ನಾವು ಕುಂದಾಪುರದಲ್ಲಿ ಎಷ್ಟು ವರ್ಷ ಅನ್ಯೋನ್ಯತೆಯಿಂದ ಇದ್ದೆವು. ರಾಜಕೀಯ ಸಂಘಟನೆ ಈ ವಿಚಾರಕ್ಕೆ ಪ್ರವೇಶ ಆಗಬಾರದು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ನಮಗೆ ಮುಖ್ಯ ಎಂದರು.
ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಎಸ್ಬಿಸಿ ಸಭೆ ಪೂರ್ಣಗೊಂಡಿದೆ. ಧಾರ್ಮಿಕತೆಗೆ ತರಗತಿಯೊಳಗೆ ಅವಕಾಶ ಬೇಡ. ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ತರಗತಿಗೆ ಬರುವಂತಿಲ್ಲ. ಶುಕ್ರವಾರ ಗೇಟ್ ಬಾಗಿಲಲ್ಲೇ ಕುಳಿತಿದ್ದ ವಿದ್ಯಾರ್ಥಿನಿಯರಿಗೆ ಸೋಮವಾರದಿಂದ ಕಾಲೇಜು ಗೇಟಿನೊಳಗೆ ಬರಲು ಅವಕಾಶ ನೀಡಲಾಗಿದೆ.
ಆದರೆ, ಹಿಜಾಬ್ ಧರಿಸಿ ತರಗತಿಗೆ ಬರುವಂತಿಲ್ಲ. ಕೇಸರಿ ಶಾಲಿನವರಿಗೂ ಗೇಟಿನೊಳಗೆ ಬರಲು ಅವಕಾಶವಿಲ್ಲ. ತರಗತಿಗೆ ಹೋಗೋದಾದ್ರೆ ಹಿಜಾಬ್ -ಕೇಸರಿ ಶಾಲು ತೆಗೆದಿರಿಸಿ ಹೋಗಬೇಕು ಎಂದು ಎಸ್ಬಿಸಿ ಸದಸ್ಯ ಮೋಹನದಾಸ ಶೆಣೈ ಹೇಳಿದ್ದಾರೆ.
ಕುಂದಾಪುರದ ಬಿ ಬಿ ಹೆಗ್ಡೆ ಕಾಲೇಜಿನಲ್ಲಿ ಹಿಜಾಬ್ ಕೇಸರಿ ವಿವಾದ ಮುಂದುವರಿದಿದೆ. ಹಿಜಾಬ್ ಧರಿಸಲು ಅವಕಾಶ ಕೋರಿದ ಮುಸ್ಲಿಂ ವಿದ್ಯಾರ್ಥಿನಿಯರು, ಪೋಷಕರ ಜೊತೆ ಕಾಲೇಜಿಗೆ ಬಂದಿದ್ದರು. ಪ್ರಾಂಶುಪಾಲರ ಜೊತೆ ಸಭೆ ನಡೆಸಿದ ಪೋಷಕರು, ನಾವು ಹಿಂದಿನಿಂದಲೂ ಹಿಜಾಬ್ ಧರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಧಾರ್ಮಿಕ ಹಕ್ಕು ಪಾಲಿಸಲು ಅವಕಾಶ ಕೊಡಬೇಕು ಎಂದು ಮಾಧ್ಯಮಗಳ ಮುಂದೆ ಮುಸ್ಲಿಂ ವಿದ್ಯಾರ್ಥಿನಿಯರು ಒತ್ತಾಯ ಮಾಡಿದ್ದಾರೆ.
ಕುಂದಾಪುರದ ಕೆಲ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿತ್ತು. ಗಲಾಟೆಗೆ ಅವಕಾಶ ಆಗಬಾರದೆಂದು ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.