ಉಡುಪಿ: ಭಾರೀ ಮಳೆಗೆ ಕರ್ನಾಟಕದ ಕರಾವಳಿ ತೀರ ತತ್ತರಿಸಿದ್ದು, ಕಳೆದ ಮೂರು ದಿನಗಳಿಂದ ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 117 ಮಿಲಿ ಮೀಟರ್ ಸರಾಸರಿ ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬಿದ್ದಿದ್ದು, 121 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕುಂದಾಪುರ ತಾಲೂಕಿನಲ್ಲಿ 110, ಕಾರ್ಕಳದಲ್ಲಿ 110 ಮಿಲಿ ಮೀಟರ್ ಮಳೆ ಬಿದ್ದಿದೆ. ಈ ನಡುವೆ ಮಣಿಪಾಲ ಸಮೀಪದ ಪರ್ಕಳದಲ್ಲಿ ಭಾರೀ ಗಾತ್ರದ ಮರವೊಂದು ಧರೆಗುರುಳಿದೆ. ಸುಮಾರು ಒಂದು ಗಂಟೆ ಕಾಲ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ಬಳಿಕ ನಗರಸಭೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.
ಕೆಲವೆಡೆ ವಿದ್ಯುತ್ ಕಂಬಗಳಿಗೆ ಮರ ಬಿದ್ದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸಮುದ್ರ ತಟದಲ್ಲಿ ಗಂಟೆಗೆ 40 ಕಿಲೋ ಮೀಟರ್ ವೇಗದಿಂದ ಗಾಳಿ ಬೀಸುತ್ತಿತ್ತು. ಹಾಗಾಗಿ ನಾಡದೋಣಿ, ಆಳ ಸಮುದ್ರ ಮೀನುಗಾರರು ಕಡಲಿಗೆ ಇಳಿದಿಲ್ಲ.