ಉಡುಪಿ: ಮುಂಗಾರು ಮಳೆ ಇಲ್ಲದೆ ಸೊರಗಿದ್ದ ಉಡುಪಿ ಜಿಲ್ಲೆಗೆ ಪುನರ್ವಸು ಮಳೆ ನವ ಚೈತನ್ಯ ನೀಡಿದ್ದು, ನಿನ್ನೆಯಿಂದ ಸುರಿಯುತ್ತಿರುವ ಮಳೆ ಇವತ್ತೂ ಮುಂದುವರೆದಿದೆ.
ಮುಖ್ಯವಾಗಿ ಕರಾವಳಿಯ ಭತ್ತ ಕೃಷಿಕರಿಗೂ ಈ ಮಳೆಯ ಅಗತ್ಯ ಇತ್ತು. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 122 ಮಿಲಿ ಮೀಟರ್ ಮಳೆ ದಾಖಲಾಗಿದ್ದು, ಕುಂದಾಪುರದಲ್ಲಿ 124 ಮಿಲಿ ಮೀಟರ್ ಮಳೆ, ಕಾರ್ಕಳದಲ್ಲಿ 122 ಮತ್ತು ಉಡುಪಿಯಲ್ಲಿ 120 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು, ಇನ್ನೆರಡು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಮುಖ್ಯವಾಗಿ ಗಾಳಿ, ಸಿಡಿಲಿನ ಅಬ್ಬರವಿಲ್ಲದ ಮಳೆಗೆ ಜನ ಹರ್ಷಗೊಂಡಿದ್ದಾರೆ.
ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕೆಲವೆಡೆ ಹಾನಿ ಸಂಭವಿಸಿದ್ದು, ಕುಂದಾಪುರ ತಾಲೂಕಿನಲ್ಲಿ ಹನ್ನೊಂದು ಮನೆಗಳು ಹಾನಿಗೊಂಡಿವೆ. ಮೂವತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ನಿರಂತರ ಮಳೆಯಿಂದ ಸೀತಾ ಮತ್ತು ಮಡಿಸಾಲು ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬ್ರಹ್ಮಾವರ ಗ್ರಾಮಾಂತರ ಪ್ರದೇಶಗಳಲ್ಲಿ ನೆರೆ ಭೀತಿ ಉಂಟಾಗಿದೆ.
ವಿದ್ಯುತ್ ಕಂಬ ಧರೆಗುರುಳಿದ ಪರಿಣಾಮ ಕೋಟದಲ್ಲಿ ವಿದ್ಯುತ್ ವ್ಯತ್ಯಯ ಆಗಿದ್ದು, ಜಿಲ್ಲೆಯ ಕೆಲವು ಭಾಗಗಳಲ್ಲಿ ಕತ್ತಲು ಆವರಿಸಿದೆ.