ಉಡುಪಿ: ಜಿಲ್ಲೆಯ ಕುಂದಾಪುರದಲ್ಲಿ ನಿವೇಶನರಹಿತ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಒಂದಿಷ್ಟು ಸರ್ಕಾರಿ ಜಮೀನು ಇದೆ. ಆದ್ರೆ ಈ ಜಮೀನುಗಳು ನಿಜಾರ್ಥದಲ್ಲಿ ನಿವೇಶನರಹಿತರಿಗೆ ಸಿಕ್ತಾ ಇಲ್ಲ. ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಸ್ವತಃ ಜಮೀನು ಇರೋ ಮಾಲೀಕರೇ ಒಳಬಾಗಿಲಿನಿಂದ ಅರ್ಜಿ ಸಲ್ಲಿಸಿ ಕಂದಾಯ ಅಧಿಕಾರಿಗಳ ಕೃಪಕಟಾಕ್ಷದೊಂದಿಗೆ, ಜನಪ್ರತಿನಿಧಿಗಳ ಪ್ರಭಾವ, ಹಣದ ಬಲದೊಂದಿಗೆ ಕಾನೂನನ್ನು ಗಾಳಿಗೆ ತೂರಿ ಭೂಮಿ ಮಂಜೂರಾತಿ ಮಾಡಿಸಿಕೊಳ್ಳುತ್ತಿದ್ದಾರೆ.
ಕೊರ್ಗಿ ಗ್ರಾಮದ ಮೂಡುಕೊರ್ಗಿಯ ನಿವಾಸಿ ರಾಜೀವಿ ಶೆಟ್ಟಿಯವರಿಗೆ ಹಿರಿಯರಿಂದ ಬಂದ ಜಮೀನು, ಮನೆಯಲ್ಲಿ ಒಬ್ಬ ಸರ್ಕಾರಿ ನೌಕರ ಇದ್ದರೂ, ಕೋವಿಡ್ ಗಡಿಬಿಡಿಯಲ್ಲಿ ನಿವೃತ್ತಿ ಅಂಚಿನಲ್ಲಿದ್ದ ಕುಂದಾಪುರ ತಹಶೀಲ್ದಾರ್ ಮೂಲಕ ಕೊನೆಗಳಿಗೆಯಲ್ಲಿ ಆರ್ಸಿಸಿ ಕಟ್ಟಡದ ಮನೆಗೆ ಜಮೀನು ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ನೂರಾರು ಜನರ ವಿರೋಧದ ಪತ್ರಗಳಿದ್ದರೂ ತಹಶೀಲ್ದಾರ್ ರಸ್ತೆ ಷರತ್ತಿನ ಮೇರೆಗೆ ಜಮೀನು ಮಂಜೂರು ಮಾಡಿದ್ದಾರೆ.
ಈ ರಸ್ತೆ ಮೂಲಕ 50ಕ್ಕೂ ಹೆಚ್ಚು ಮನೆಗಳು ದಾರಿಯನ್ನು ಅವಲಂಬಿಸಿದೆ. ಸರ್ಕಾರಿ ಆದೇಶದ ಪ್ರಕಾರ ಸರ್ವೆ ಮಾಡಿ ಒತ್ತುವರಿ ಮಾಡಿದ ಜಮೀನನ್ನು ಅಧಿಕಾರಿಗಳೇ ತೆರವು ಮಾಡಲು ಬಂದ್ರೆ, ರಾಜೀವಿ ಶೆಟ್ಟಿ ಮತ್ತು ಶೇಖರ ಶೆಟ್ಟಿಯವರು ಜೆಸಿಬಿಗೆ ಅಡ್ಡವಾಗಿ ಮಲಗಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಪೊಲೀಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೆಡ್ಡು ಹೊಡೆದು ಆದೇಶಕ್ಕೂ ಬೆಲೆ ಕೊಡದೆ ರಸ್ತೆ ಸರ್ಕಾರಿ ಜಮೀನು ತೆರವು ಗೊಳಿಸಲು ಅವಕಾಶ ಕೊಟ್ಟಿಲ್ಲ.
ಇದೀಗ ಅಧಿಕಾರಿಗಳೇ ಜಮೀನು ತೆರವುಗೊಳಿಸದೆ ವಾಪಸ್ ಮರಳಿದ್ದಾರೆ. ಸರ್ಕಾರಿ ಆದೇಶವನ್ನು ಪಾಲಿಸಿಲ್ಲ. ಕರ್ತವ್ಯಕ್ಕೆ ಅಡ್ಡಿ ಪ್ರಕರಣವನ್ನು ದಾಖಲಿಸಿಲ್ಲ. ಇಲ್ಲಿನ ಜನತೆ ದಿಕ್ಕು ತೋಚದೆ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಮಂಜೂರಾತಿಯ ಆದೇಶ ರದ್ದು ಮಾಡುವಂತೆ ವಿನಂತಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.