ಉಡುಪಿ: ಸದಾ ಉತ್ಸವಗಳಿಂದ ಮಿಂದೇಳುವ ಕೃಷ್ಣ ಮಠದಲ್ಲಿ ಈಗ ಜನ್ಮಾಷ್ಠಮಿ ಸಂಭ್ರಮ. ಅಷ್ಟಮಿ ಪ್ರಯುಕ್ತ ಶುಕ್ರವಾರ ಅರ್ಘ್ಯ ಪ್ರಧಾನ ನಡೆಯಲಿದ್ದರೆ, ಶನಿವಾರ ವಿಟ್ಲಪಿಂಡಿ ಉತ್ಸವವಿದೆ. ಪರ್ಯಾಯ ಮಹೋತ್ಸವದ ಬಳಿಕ ಮಠದ ದೊಡ್ಡ ಹಬ್ಬ ಅಷ್ಟಮಿ. ಈ ನಿಟ್ಟಿನಲ್ಲಿ ರಾಜಾಂಗಣದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಇಲ್ಲಿನ ರಥಬೀದಿಯಲ್ಲಿ ತಯಾರಿ ಜೋರಾಗಿದೆ.
ಕಡೆಗೋಲು ಕೃಷ್ಣನಿಗೆ ಪ್ರಿಯವಾದ ಉಂಡೆ ಚಕ್ಕುಲಿಯನ್ನು ಬಾಣಸಿಗರ ತಂಡ ಶ್ರಮವಹಿಸಿ ತಯಾರಿಸುತ್ತಿದೆ. ಸುಮಾರು ಒಂದು ಲಕ್ಷದಷ್ಟು ಚಕ್ಕುಲಿ ಮತ್ತು ಅಷ್ಟೇ ಪ್ರಮಾಣದ ಉಂಡೆ ತಯಾರಿಸುವ ಕಾರ್ಯ ಭರದಿಂದ ಸಾಗಿದೆ. ಬಾಯಲ್ಲಿ ನೀರೂರಿಸುವ ಚಕ್ಕುಲಿ ಮತ್ತು ಉಂಡೆ ಪ್ರಸಾದವನ್ನು ಅಷ್ಟಮಿಯಂದು ಕೃಷ್ಣನಿಗೆ ಅರ್ಪಿಸಲಾಗುತ್ತದೆ. ಬಳಿಕ ಮಠಕ್ಕೆ ಬಂದ ಭಕ್ತಗಣಕ್ಕೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.
ಉಂಡೆ, ಚಕ್ಕುಲಿ ಪ್ರಸಾದ ತಯಾರಿಸುವುದು ಕೃಷ್ಣ ಜನ್ಮಾಷ್ಟಮಿಯ ಪ್ರಮುಖ ತಯಾರಿಗಳಲ್ಲೊಂದು. ಇದಕ್ಕಾಗಿಯೇ ಮಠದಲ್ಲಿ 50ಕ್ಕೂ ಹೆಚ್ಚು ಬಾಣಸಿಗರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಮಠಕ್ಕೆ ಬರುವ ಭಕ್ತರಿಗೆ ಮಾತ್ರವಲ್ಲ, ಮಠದಿಂದ ಪ್ರತಿನಿತ್ಯ ಅನ್ನ ಪ್ರಸಾದ ನೀಡಲಾಗುವ ಶಾಲಾ ವಿದ್ಯಾರ್ಥಿಗಳಿಗೂ ಈ ಪ್ರಸಾದ ಸಿಗಲಿದೆ. ಉತ್ಸವಪ್ರಿಯ, ಪೊಡವಿಗೊಡೆಯ, ಕಡಗೋಲು ಕೃಷ್ಣನನ್ನು ಜನ್ಮಾಷ್ಟಮಿ ಸಂದರ್ಭದಲ್ಲಿ ಸಂತುಷ್ಠಗೊಳಿಸಲು ಬೇಕಾದ ಸರ್ವ ಸಿದ್ಧತೆ ನಡೆಯುತ್ತಿದೆ.