ಉಡುಪಿ : ಬೈಂದೂರು ತಾಲೂಕಿನ ಒತ್ತಿನೆಣೆ ಸಮೀಪದ ಹೇನಬೇರು ಒಳ ರಸ್ತೆಯಲ್ಲಿ ಕಾರುನಲ್ಲಿ ವ್ಯಕ್ತಿಯೋರ್ವ ಸುಟ್ಟು ಕರಕಲಾಗಿ ಪತ್ತೆಯಾದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಆತ್ಮಹತ್ಯೆಯ ನಾಟಕವಾಡಲು ಮುಂದಾದ ವ್ಯಕ್ತಿಯೊಬ್ಬನ ಸಂಚಿಗೆ ಅಮಾಯಕ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ.
ಕಾರ್ಕಳ ಮೂಲದ ಆನಂದ ದೇವಾಡಿಗ (62) ಕೊಲೆಯಾದ ವ್ಯಕ್ತಿ . ಕೊಲೆ ಪ್ರಕರಣ ಸಂಬಂಧಪಟ್ಟಂತೆ ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30) ಮತ್ತು ಇವರಿಗೆ ಸಹಕರಿಸಿದ ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49) ಹಾಗೂ ನಿತಿನ್ ದೇವಾಡಿಗ (40) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸದಾನಂದ ಶೇರಿಗಾರ್ ಈ ಹಿಂದೆ ಸರ್ವೇಯರ್ ಆಗಿದ್ದು, ಇದೀಗ ಕಲ್ಲು ಕ್ವಾರಿ ನಡೆಸುತ್ತಿದ್ದಾನೆ. ಆರೋಪಿಗೆ ಇಬ್ಬರು ಪುತ್ರಿಯರಿದ್ದಾರೆ. ಇನ್ನೋರ್ವ ಆರೋಪಿ ಶಿಲ್ಪಾ ಕೂಡ ವಿವಾಹಿತರು. ಕೃತ್ಯದ ಬಳಿಕ ಈ ಆರೋಪಿಗಳಿಗೆ ಪರಾರಿಯಾಗಲು ಸಹಕರಿಸಿದ ಸತೀಶ್ ಟೈಲರಿಂಗ್ ವೃತ್ತಿ ಮಾಡುತ್ತಿದ್ದು, ನಿತೀಶ್ ಫೋಟೋಗ್ರಾಫರ್ ವೃತ್ತಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಆರೋಪಿಯ ಸಂಚಿಗೆ ಬಲಿಯಾದ ಅಮಾಯಕ ಮೇಸ್ತ್ರೀ : ಈ ಹಿಂದೆ ಕಾರ್ಕಳದಲ್ಲಿ ಸರ್ವೇಯರ್ ಆಗಿದ್ದ ಸದಾನಂದ ಶೇರಿಗಾರ್ ತನ್ನ ಮೇಲಿದ್ದ ಹಣ ಮತ್ತು ಜಾಗದ ವ್ಯಾಜ್ಯವನ್ನು ಮುಚ್ಚಿಹಾಕಲು , ತಾನೇ ಸತ್ತು ಹೋಗಿರುವುದಾಗಿ ಬಿಂಬಿಸಲು ಯೋಜನೆ ರೂಪಿಸಿದ್ದ. ಅಂತೆಯೇ ಯೋಜನೆಯಂತೆ ಶಿಲ್ಪಾ ಎಂಬಾಕೆಯ ಸಹಾಯದಿಂದ ಆನಂದ ದೇವಾಡಿಗನನ್ನು ಕುತಂತ್ರದಿಂದ ಕರೆಸಿ ಮದ್ಯದಲ್ಲಿ ಅಮಲು ಮಾತ್ರೆಯನ್ನು ಹಾಕಿ ಬಳಿಕ ನಿರ್ಜನ ಪ್ರದೇಶಕ್ಕೆ ಕರೆ ತಂದಿದ್ದರು. ಬಳಿಕ ಸದಾನಂದ ಯೋಜನೆಯಂತೆಯೇ ತನ್ನ ಕಾರಿನೊಳಗೆ ಆನಂದ ದೇವಾಡಿಗರನ್ನು ಕುಳ್ಳಿರಿಸಿ ಬಳಿಕ ಕಾರಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದರು.
ಪ್ರಕರಣದ ತನಿಖೆಗೆ ಪೊಲೀಸರು ಎರಡು ತಂಡವನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದರು. ಗುರುವಾರ ಬೆಳಗ್ಗೆ ಮೂಡುಬಿದಿರೆ ಹುಲ್ಕೇರಿ ಕ್ರಾಸ್ ಬಳಿ ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಳಿಕ ಕೊಲೆಗೆ ಸಹಕರಿಸಿದ ಇನ್ನಿಬ್ಬರು ಆರೋಪಿಗಳನ್ನು ಬಳಿಕ ಬಂಧಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಓದಿ : ಉಡುಪಿ: ಒತ್ತಿನೆಣೆ ಕಾಡು ಪ್ರದೇಶದಲ್ಲಿ ಅಪರಿಚಿತ ಸುಟ್ಟ ಶವ ಪತ್ತೆ