ಉಡುಪಿ/ ಸುಳ್ಯ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಬುರೆವಿ ಚಂಡಮಾರುತದಿಂದಾಗಿ ಮಂಗಳವಾರ ಸಂಜೆ ಉಡುಪಿ, ಸುಳ್ಯ ಹಾಗೂ ಕಡಬದ ಸುತ್ತಮುತ್ತ ಮಳೆಯಾಗಿದೆ.
ಉಡುಪಿಯಲ್ಲಿ ಮಂಗಳವಾರ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆ ನಗರದಾದ್ಯಂತ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು. ಗುಡುಗು ಮಿಂಚು ಸಹಿತ ಸುರಿದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾದವು.
ಸುಳ್ಯ, ಕಡಬದಲ್ಲು ಉತ್ತಮ ಮಳೆ:
ಸುಳ್ಯ ಮತ್ತು ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಮಂಗಳವಾರ ಸಂಜೆ ವೇಳೆ ಉತ್ತಮ ಮಳೆ ಸುರಿಯಿತು. ಉಭಯ ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ. ಹಲವು ಕಡೆಗಳಲ್ಲಿ ಉತ್ತಮ ಮಳೆಯಾದರೆ, ಕೆಲವು ಕಡೆಗಳಲ್ಲಿ ಸ್ವಲ್ಪ ಮಟ್ಟಿನ ಮಳೆಯಾಗಿದೆ. ಕೆಲವೆಡೆ ಗಾಳಿಯೂ ಬೀಸಿದ್ದು, ಕಡಬ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಕಂಡುಬಂತು. ಅಡಿಕೆ ಕೃಷಿಕರು ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆ ಒದ್ದೆಯಾಗಿದ್ದು, ಏಕಾಏಕಿ ಸುರಿದ ಮಳೆಗೆ ಕೃಷಿಕರು ಕಂಗಾಲಾದರು.