ಉಡುಪಿ : ಡ್ರಗ್ಸ್ ದಂಧೆ ಮಟ್ಟ ಹಾಕಲು ಯಾವುದೇ ರೀತಿಯಿಂದಲೂ ಹಿಂಜರಿಯೋದಿಲ್ಲ. ಮುಲಾಜಿಲ್ಲದೇ ಈ ಜಾಲಕ್ಕೆ ಸಂಬಂಧಿಸಿದವರನ್ನು ವಿಚಾರಿಸುತ್ತೇವೆ. ಹೆಚ್ಚಿನ ಅನುಮಾನಗಳಿದ್ರೇ ಬಂಧಿಸುತ್ತೇವೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಇಲ್ಲಿನ ಎಸ್ಪಿ ಕಚೇರಿಯಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ಡ್ರಗ್ಸ್ ನಿಯಂತ್ರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ಬೆಂಗಳೂರಲ್ಲಿ ಕಳೆದ 10 ದಿನಗಳಿಂದ ಅನೇಕ ಪ್ರಕರಣ ಬೆಳಕಿಗೆ ಬಂದಿವೆ. ನಮ್ಮ ಕಾರ್ಯಾಚರಣೆ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ಬೆಳಗಾವಿ, ಹುಬ್ಬಳ್ಳಿ, ಚಿತ್ರದುರ್ಗ, ಕರಾವಳಿ ಭಾಗದಲ್ಲೂ ಕಾರ್ಯಾಚರಣೆ ನಡೆಸಿದ್ದೇವೆ ಎಂದರು.
ಈಗ ಆಗಿರುವ ಕಾರ್ಯಾಚರಣೆಗಳಿಂದ ನಮಗೆ ಸಮಾಧಾನವಾಗಿಲ್ಲ. ಸಾಫ್ಟ್ ಡ್ರಗ್ಸ್, ನ್ಯಾಚುರಲ್ ಡ್ರೆಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಎಲ್ಲವನ್ನೂ ನಿಯಂತ್ರಣ ಮಾಡುತ್ತೇವೆ. ಚಾಕೊಲೇಟ್, ಡ್ರಿಂಕ್ಸ್ಗಳಲ್ಲೂ ಸೇರಿಸಿ ಕೊಡಲಾಗುತ್ತಿದೆ ಎಂಬ ಮಾಹಿತಿ ಇದೆ. ಎಲ್ಲಾ ಬಗೆಯ ಡ್ರಗ್ಸ್ ಬಗೆಗೂ ಕ್ರಮ ತೆಗೆದುಕೊಳ್ಳಲು ಐಜಿ-ಎಸ್ಪಿಗೆ ಸೂಚನೆ ನೀಡಿದ್ದೇನೆ ಎಂದರು.
ಮಾದಕ ವಸ್ತುಗಳು ಯಾವುದೇ ಮಾರ್ಗವಾಗಿ ಬಂದರೂ ತಡೆ ಹಿಡಿಯುತ್ತೇವೆ. ಸದ್ಯ ಕಾಲೇಜುಗಳು ಮುಚ್ಚಿದ್ದರೂ ಡ್ರಗ್ಸ್ ದಂಧೆ ನಡೆಯುತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸಿಎಂ ಕೂಡ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು. ಬೇರು ಸಮೇತ ಕಿತ್ತು ಹಾಕಲಾಗುವುದು ಎಂದು ಹೇಳಿದರು.
ಬೇರೆ ಕಡೆಯೂ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಸುದ್ದಿಯಾಗಲ್ಲ. ಸೆಲೆಬ್ರಿಟಿಗಳ ಬಂಧನ ಇತ್ಯಾದಿ ವಿಚಾರ ಬೆಂಗಳೂರು ಕಮಿಷನರ್ ಮಾತನಾಡುತ್ತಾರೆ. ತನಿಖೆ ನಡೆಯುತ್ತಿರುವಾಗ ಪೊಲೀಸ್ ಅಧಿಕಾರಿಯಾಗಿ ಮಾತನಾಡುವುದು ಸರಿಯಲ್ಲ. ರಾಜ್ಯ ಸರ್ಕಾರ ಮುಕ್ತ ಅವಕಾಶ ನೀಡಿದೆ. ಅಷ್ಡು ಮಾತ್ರವಲ್ಲ, ರಾಜ್ಯವನ್ನು ಡ್ರಕ್ಸ್ ಮುಕ್ತ ಮಾಡುವ ಸೂಚನೆ ನೀಡಿದ್ದಾರೆ ಎಂದರು.